ಶುಕ್ರವಾರ, ಡಿಸೆಂಬರ್ 4, 2020
21 °C
ಕೆರೆಗೆ ಕಾಯಕಲ್ಪ ಕಲ್ಪಿಸಿ: ಕೂರ್ಗಳ್ಳಿ ಗ್ರಾ.ಪಂ. ಆಡಳಿತಕ್ಕೆ ಸ್ಥಳೀಯರಿಂದ ಹೆಚ್ಚಿದ ಒತ್ತಡ

ಮೈಸೂರು | ಒಡೆದ ಗೋಣಿಕೆರೆ ಏರಿ, ತಪ್ಪದ ಆತಂಕ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಹೊರ ವಲಯದಲ್ಲಿನ ಹೂಟಗಳ್ಳಿಯ ಗೋಣಿಕೆರೆ ಏರಿ ಒಡೆದಿದ್ದು, ಈ ಭಾಗದ ಜನರ ಆತಂಕ ದಿನವೂ ತಪ್ಪದಾಗಿದೆ.

ಕೆರೆಯ ಏರಿ ಒಡೆದು ತಿಂಗಳು ಗತಿಸಿದರೂ, ಸಂಬಂಧಿಸಿದ ಜನಪ್ರತಿನಿಧಿ ಗಳಾಗಲೀ, ಅಧಿಕಾರಿಗಳಾಗಲೀ ಶಾಶ್ವತ ಪರಿಹಾರಕ್ಕೆ ಯಾವೊಂದು ಕ್ರಮ ತೆಗೆದುಕೊಂಡಿಲ್ಲ. ಏರಿ ಒಡೆದಿರುವ ಜಾಗಕ್ಕೆ ಮರಳಿನ ಮೂಟೆಗಳನ್ನಿಟ್ಟು ಕೈ ತೊಳೆದುಕೊಂಡಿದ್ದಾರೆ.

ಇದು ಕೆರೆಯ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಯಾವಾಗ ಮತ್ತಷ್ಟು ಬಿರುಕು ಬಿಟ್ಟು ಮನೆಗಳಿಗೆ ಅಪಾಯ ತಂದೊಡ್ಡಲಿದೆ ಎಂಬ ಆತಂಕದಲ್ಲೇ ದಿನ ದೂಡುವಂತೆ ಮಾಡಿದೆ.

ರಾತ್ರಿಯ ವೇಳೆ ಕೆರೆಯ ಏರಿ ಬಿರುಕು ಬಿಟ್ಟು ಒಡೆದು ಹೋಯಿತು. ನಮ್ಮ ಭಾಗದ ಎಲ್ಲ ಮನೆಗಳಿಗೂ ನೀರು ನುಗ್ಗಿ, ಮನೆಯೊಳಗಿದ್ದ ಸಾಮಗ್ರಿ ಹಾಳಾದವು. ನೂರಕ್ಕೂ ಹೆಚ್ಚು ಮನೆಗಳ ಜನರು ತೊಂದರೆಗೀಡಾದರು. 2017ರಲ್ಲೂ ಒಮ್ಮೆ ಗೋಣಿಕೆರೆಯ ಏರಿ ಒಡೆದಿತ್ತು. ಆಗ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು. ಶಾಶ್ವತ ಪರಿಹಾರ ಕಲ್ಪಿಸದಿರುವುದರಿಂದ ಸಮಸ್ಯೆ ಜೀವಂತವಾಗಿದೆ ಎಂದು ಸ್ಥಳೀಯರು ದೂರಿದರು.

ಮೊದಲ ಬಾರಿಗೆ ಕೆರೆ ಏರಿ ಒಡೆದ ಬಳಿಕ ನಮ್ಮ ಮನೆಗಳಿಗೆ ಶೀತ ತಗುಲಲಾರಂಭಿಸಿದೆ. ತೇವಾಂಶ ಹೆಚ್ಚಿ ಅಡಿಪಾಯದ ಭದ್ರತೆಗೆ ಧಕ್ಕೆಯಾಗುತ್ತಿದೆ. ಕೆರೆಯ ನೀರಿನ ಬಸಿ ನಮ್ಮ ಮನೆಗಳಿಗೆ ಅಪಾಯ ಮಾಡದಂತೆ ಕ್ರಮ ತೆಗೆದುಕೊಳ್ಳಿ ಎಂದು ವರ್ಷಗಳಿಂದಲೂ ಸ್ಥಳೀಯ ಆಡಳಿತವಾದ ಕೂರ್ಗಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ; ಸ್ಪಂದನೆ ಮಾತ್ರ ಶೂನ್ಯವಾಗಿದೆ ಎಂದು ಸ್ಥಳೀಯ ನಿವಾಸಿಗಳು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಕೆರೆಯ ಕುರುಹೇ ಸಿಗಲ್ಲ: ‘ತೊಂಬತ್ತರ ದಶಕದಿಂದಲೂ ಗೋಣಿಕೆರೆ ಅತಿಕ್ರಮಣಕ್ಕೆ ತುತ್ತಾಗಿದೆ. ಕೆರೆಯ ಪ್ರದೇಶದಲ್ಲೇ ರೆಸಾರ್ಟ್‌ ನಿರ್ಮಾಣಗೊಂಡಿದೆ. ನಾವು ಚಿಕ್ಕವರಿದ್ದಾಗ ಈ ಕೆರೆಯಲ್ಲೇ ಈಜುತ್ತಿದ್ದೆವು. ತುಂಬಾ ಆಳದ ಕೆರೆಯಿದು. ರಾಜಕಾಲುವೆಯ ಸಂಪರ್ಕ ಇರುವುದರಿಂದ ಮಳೆಗಾಲದಲ್ಲಿ ಪ್ರತಿ ವರ್ಷವೂ ಭರ್ತಿಯಾಗಿರುತ್ತಿತ್ತು’ ಎಂದು ಗ್ರಾಮದ ರವಿ ತಿಳಿಸಿದರು.

‘ಇದೀಗ ಕೆರೆಯ ಅರ್ಧಕ್ಕರ್ಧ ಜಾಗ ಅತಿಕ್ರಮಣಕ್ಕೊಳಗಾಗಿದೆ. ಚುನಾಯಿತ ಪ್ರಭಾವಿಗಳು, ಅಧಿಕಾರಿಗಳ ಶಾಮೀಲಿನಿಂದ ಒತ್ತುವರಿ ಮುಂದುವರೆದಿದೆ. ಇನ್ನಷ್ಟು ವರ್ಷ ಕಳೆದರೆ ಇಲ್ಲೊಂದು ಕೆರೆಯಿತ್ತು ಎಂಬ ಕುರುಹು ಸಿಗಲ್ಲವೇನೋ’ ಎಂಬ ಅನುಮಾನ ವ್ಯಕ್ತಪಡಿಸಿದರು ರವಿ.

ಕಾಯಕಲ್ಪ: ಕೋಟಿ ಮೊತ್ತದ ಯೋಜನೆ

ಸಂಸದ ಪ್ರತಾಪಸಿಂಹ ಗೋಣಿಕೆರೆಯ ಅಭಿವೃದ್ಧಿಗೆ ₹ 1.10 ಕೋಟಿ ಮೊತ್ತದ ಯೋಜನೆಯೊಂದನ್ನು ರೂಪಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಕೆರೆಯ ಎರಡೂ ಬದಿಗೆ ಸಿಮೆಂಟ್‌ನ ತಡೆಗೋಡೆ ನಿರ್ಮಿಸುವ ಜೊತೆಗೆ, ನೀರು ಬಸಿಯುವ ಸ್ಥಳಕ್ಕೆ ಕಾಂಕ್ರಿಟೀಕರಣ ಮಾಡುವ ಪ್ರಸ್ತಾವವಿದೆ ಎನ್ನಲಾಗಿದೆ.

‘ಕೂರ್ಗಳ್ಳಿ ಗ್ರಾಮ ಪಂಚಾಯಿತಿ ಆಡಳಿತವೂ ₹ 60 ಲಕ್ಷ ವೆಚ್ಚದ ಯೋಜನೆ ರೂಪಿಸಿದೆ. ಕೆರೆಯ ನೀರು ಮೂರು ಕಡೆಯಿಂದ ಹೊರಹೋಗು ವಂತೆ ತಲಾ ₹ 5 ಲಕ್ಷ ವೆಚ್ಚದಲ್ಲಿ ಮೂರು ಡೆಕ್ ನಿರ್ಮಾಣಕ್ಕೆ ಯೋಜಿಸಿದೆ. ಕೆರೆಯಿಂದ ನೀರು ಸರಾಗವಾಗಿ ಹರಿಯಲು ₹ 15 ಲಕ್ಷ ಹಾಗೂ ₹ 30 ಲಕ್ಷ ವೆಚ್ಚದಲ್ಲಿ ಎರಡು ಕಾಲುವೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಪಿಡಿಒ ಬಸವಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.