ಗುರುವಾರ , ಜೂನ್ 17, 2021
21 °C
ಸರ್ಕಾರದ ವಿರುದ್ಧ ಟೀಕಾಪ್ರಹಾರ

ಪಡಿತರ ಅಕ್ಕಿ ಕಡಿತ, ಉಮೇಶ್‌ ಕತ್ತಿ ರಾಜೀನಾಮೆಗೆ ಆಗ್ರಹ: ಲಕ್ಷ್ಮಣ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪಡಿತರ ಅಕ್ಕಿಯನ್ನು ಕಡಿತ ಮಾಡುವ ಮೂಲಕ ಜನರು ಹಸಿವಿನಿಂದ ಸಾಯಲು ಸರ್ಕಾರವೇ ಉತ್ತೇಜನ ನೀಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹರಿಹಾಯ್ದರು.

ಉಮೇಶ್‌ ಕತ್ತಿ ಅವರು ಪಡಿತರ ಅಕ್ಕಿಯನ್ನು ಕೇಳಿದ ವ್ಯಕ್ತಿಗೆ ಸಾಯಿ ಎಂದು ಹೇಳುವ ಮೂಲಕ ಬಿಜೆಪಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಇಂದಿರಾ ಕ್ಯಾಂಟೀನ್‌, ಮಾತೃಪೂರ್ಣ ಯೋಜನೆ ರದ್ದು ಮಾಡಿದಾಗಲೇ ಬಿಜೆಪಿ ಉಳ್ಳವರ ಪರ ಎಂಬುದು ಅರಿವಾಗಿತ್ತು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‌ಉಮೇಶ್‌ ಕತ್ತಿ ಅವರ ಹೇಳಿಕೆಗೆ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಸಿ.ಟಿ.ರವಿ ಪ್ರತಿಕ್ರಿಯಿಸಿಲ್ಲ. ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಉಮೇಶ್‌ ಕತ್ತಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸಂಸದರು ಮತ್ತು ಶಾಸಕರು ತಮ್ಮ ತೋಟದ ಮನೆಗಳಲ್ಲಿ ಮತ್ತು ಕೆಲವರು ವಿದೇಶದಲ್ಲಿದ್ದಾರೆ. ಕಾಂಗ್ರೆಸ್‌ನವರು ಸಣ್ಣ ತಪ್ಪು ಮಾಡಿದಾಗಲೂ ಕೂಗಾಡುವ ಬಿಜೆಪಿಯವರು ಕೋವಿಡ್ ಸಮಸ್ಯೆ ಬಂದಾಗ ಅವಿತುಕೊಂಡಿದ್ದಾರೆ. ಸರ್ಕಾರ ಇದ್ದಕ್ಕಿದ್ದಂತೆ ಲಾಕ್‌ಡೌನ್ ಮಾಡುವ ಮೂಲಕ ಹುಚ್ಚುತನದ ದರ್ಬಾರು ನಡೆಸುತ್ತಿದೆ ಎಂದು ದೂರಿದರು.

ಮುಂಬೈನಲ್ಲಿ ಲಾಕ್‌ಡೌನ್‌ ಮಾಡಿದಾಗ ಲಕ್ಷಾಂತರ ಜನರು ಹಳ್ಳಿಗಳಿಗೆ ಹೋಗಿ ಸೋಂಕು ಹರಡಿದ್ದರು. ರಾಜ್ಯದಲ್ಲಿ ಮಾಡಿರುವ ಲಾಕ್‌ಡೌನ್‌ನಿಂದಲೂ ಇದೇ ಪರಿಸ್ಥಿತಿ ಉದ್ಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಲಿ ಇರುವ ಬೆಡ್‌, ವೆಂಟಿಲೇಟರ್‌ಗಳ ಮಾಹಿತಿ ನೀಡುವ ಆ್ಯಪ್‌ವೊಂದನ್ನು ಬಿಬಿಎಂಪಿ ರೂಪಿಸಿದೆ. ಇದೇ ಬಗೆಯಲ್ಲಿ ಮೈಸೂರಿನಲ್ಲೂ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಸಚಿವ ಎಸ್.ಟಿ.ಸೋಮಶೇಖರ್ ಅವರು ಕೇವಲ ಸಭೆ ಮಾಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣವಂತೂ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದವರು ನಡೆಸುತ್ತಿರುವ ಆಸ್ಪತ್ರೆಗಳಿಗೆ ಉದ್ದೇಶಪೂರ್ವಕವಾಗಿ ರೆಮ್‌ಡಿಸಿವಿರ್‌ನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ, ₹10 ಸಾವಿರ ನೀಡಬೇಕು. ವ್ಯಾಪಾರಸ್ಥರ ತೆರಿಗೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು