ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಅಸಾಂವಿಧಾನಿಕ; ದೇಶ ವಿಭಜಿಸುವ ಹುನ್ನಾರ

ವಿಚಾರ ಸಂಕಿರಣ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾನೂನುತಜ್ಞರು
Last Updated 3 ಫೆಬ್ರುವರಿ 2020, 10:16 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಮೂಲಕ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಕಾನೂನುತಜ್ಞರು ಆರೋಪಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ 'ಅಸಾಂವಿಧಾನಿಕ ಹಾಗೂ ತಾರತಮ್ಯದ ಎನ್‌ಪಿಆರ್‌– ಎನ್‌ಸಿಆರ್‌– ಸಿಎಎ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಗೋಪಾಲಗೌಡ, ಕರ್ನಾಟಕ ಸರ್ಕಾರ ವಿಶ್ರಾಂತ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಅವರು ಸರ್ಕಾರದ ನಿರ್ಧಾರವನ್ನು ಟೀಕಿಸಿದರು.

ರವಿವರ್ಮಕುಮಾರ್‌ ಮಾತನಾಡಿ, ಸಿಎಎ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಗೊಂದಲ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಭಟನೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ದೇಶದ ಪ್ರಧಾನಿ ಜನರ ಮಾತನ್ನು ಕೇಳಲು ಮುಂದಾಗಬೇಕು ಎಂದು ತಿಳಿಸಿದರು.

‘ಧರ್ಮದ ಆಧಾರದಲ್ಲಿ ರೂಪಿಸಿರುವ ಈ ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಮುಸ್ಲಿಮರು ಮಾತ್ರ ಇದರಿಂದ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎಂದು ಭಾವಿಸಿಕೊಂಡು ಬೇರೆಯವರು ಸುಮ್ಮನಿದ್ದರೆ ಮುಂದೆ ಎಲ್ಲರೂ ಸಮಸ್ಯೆಗೆ ಸಿಲುಕುವುದು ಖಚಿತ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

ಸರ್ಕಾರದ ವಿರುದ್ಧ ಮಾತೆತ್ತಿದರೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಅದರ ಬದಲು ಮಾತೃಹೃದಯ ಇಟ್ಟುಕೊಂಡು ಜನರೊಂದಿಗೆ ಮಾತನಾಡಲಿ ಎಂದು ಸಲಹೆ ನೀಡಿದರು.

ಅಸಾಂವಿಧಾನಿಕ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಗೋಪಾಲಗೌಡ ದೂರಿದರು.

‘ಹಿಂದುತ್ವದ ಆಧಾರದಲ್ಲಿ ಜಾರಿಯಾಗಲಿರುವ ಸಿಎಎ ಅಸಾಂವಿಧಾನಿಕ. ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವವರಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮುಸ್ಲಿಮರನ್ನು, ಶ್ರೀಲಂಕಾದಿಂದ ಬಂದಿರುವ ತಮಿಳರನ್ನು, ಟಿಬೆಟಿಯನ್ನರನ್ನು ಕೈಬಿಟ್ಟಿರುವುದಕ್ಕೆ ನಮ್ಮ ವಿರೋಧವಿದೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಆರ್‌ಎಸ್‌ಎಸ್‌ಅನ್ನು ರಾಜಕೀಯ ಕಾರಣದಿಂದ ವಿರೋಧಿಸುತ್ತಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯದ ಬೇರುಗಳನ್ನು ಅಲ್ಲಾಡಿಸುತ್ತಿರುವುದಕ್ಕೆ ಅವರನ್ನು ವಿರೋಧಿಸುತ್ತಿದ್ದೇವೆ’ ಎಂದು ಹೇಳಿದರು.

ಸಿಎಎ ವಿರುದ್ಧ ಪ್ರತಿಭಟನೆ ಮಾಡುವವರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಗಾಂಧಿಯನ್ನು ಕೊಂದ ಗೋಡ್ಸೆ ಪರ ಮೆರವಣಿಗೆ ಮಾಡುವವರನ್ನು ಏನೆಂದು ಕರೆಯಲಿ ಎಂದು ಪ್ರಶ್ನಿಸಿದರು.

ಸಿಎಎ, ಎನ್‌ಆರ್‌ಸಿ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಗೊಂದಲ ಇದೆ. ನಮ್ಮಲ್ಲೇ ಗೊಂದಲ ಇದ್ದರೆ ಇತರರಿಗೆ ಮನದಟ್ಟು ಮಾಡಿಕೊಡಲು ಸಾಧ್ಯವಿಲ್ಲ. ಆದ್ದರಿಂದ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ಕೆಲದಿನಗಳ ಹಿಂದೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಮೈಸೂರಿನಲ್ಲಿ ಸಿಎಎ ಪರ ನಡೆದ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿಗಳನ್ನು ನೀಡಿ ಹೋಗಿದ್ದರು. ಆದ್ದರಿಂದ ವಸ್ತುಸ್ಥಿತಿಯನ್ನು ಜನರ ಮುಂದಿಡುವುದು ಕಾಂಗ್ರೆಸ್‌ನ ಉದ್ದೇಶ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಇಂದು ದೇಶವನ್ನು ಕಟ್ಟುವ ಬದಲು ವಿಭಜಿಸುವ ಶಕ್ತಿಗಳು ಬಲ ಪಡೆದುಕೊಳ್ಳುತ್ತಿವೆ. ಸಂವಿಧಾನದಲ್ಲಿ ಜಾತಿ, ಕೋಮು ಆಧಾರಿತ ಆಡಳಿತಕ್ಕೆ ಅವಕಾಶವಿಲ್ಲ. ಸಂವಿಧಾನ ವಿರೋಧಿ ಕಾಯ್ದೆಗಳು ಬಂದಾಗ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಲೋಕಸಭಾ ವ್ಯಾಪ್ತಿಯ 24 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT