ಶನಿವಾರ, ಸೆಪ್ಟೆಂಬರ್ 25, 2021
29 °C
ಜನಪದ ಜಗುಲಿ– ವಿಚಾರ ಸಂಕಿರಣ

ಜಾನಪದದ ಮೂಲ ಮಟ್ಟು ಉಳಿಸಲಿ: ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಜಾನಪದದ ಮೂಲ ಮಟ್ಟುಗಳನ್ನು ಉಳಿಸಿಕೊಳ್ಳದೇ ಇದ್ದರೆ ಅದರ ರೂಪವೇ ಹಾಳಾಗುತ್ತದೆ’ ಎಂದು ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್‌ ಎಚ್ಚರಿಸಿದರು.

ಕರ್ನಾಟಕ ಜಾನಪದ ಅಕಾಡೆಮಿಯು ಮಹಾರಾಜ ಎಜುಕೇಷನ್‌ ಟ್ರಸ್ಟ್‌ ಹಾಗೂ ಗೋಪಾಲಸ್ವಾಮಿ ಶಿಶುವಿಹಾರ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಜನಪದ ಜಗುಲಿ– ವಿಚಾರ ಸಂಕಿರಣ’ ಉದ್ಘಾಟಿಸಿ ಮಾತನಾಡಿದರು.

‘ಶಿಷ್ಟಪದಕ್ಕೆ ಮೂಲವೇ ಜಾನಪದ. ಜನಪದ ಸಾಹಿತ್ಯ, ಹಾಡುಗಾರಿಕೆಯ ಮೂಲ ಮಟ್ಟು ಹಾಗೂ ಧಾಟಿಯನ್ನು ಅನುಸರಿಸಬೇಕು. ಬೇರೆ ಧಾಟಿಯನ್ನು ಬಳಸುವುದರಿಂದ ಮೂಲಕ್ಕೆ ಚ್ಯುತಿ ಉಂಟಾಗುತ್ತದೆ’ ಎಂದರು.

‘ಜಾನಪದ ಎಂಬುದು ಅನಕ್ಷರಸ್ಥರ ವಿಶ್ವವಿದ್ಯಾಲಯವಿದ್ದಂತೆ. ಇಲ್ಲಿ ಎಲ್ಲ ವಿಚಾರಗಳಿಗೂ ಪರಿಹಾರವಿದೆ. ಇಲ್ಲಿರುವ ಪ್ರೀತಿ, ಶಾಂತಿ, ಸಂಯಮವನ್ನು ರೂಢಿಸಿಕೊಳ್ಳಬೇಕಾದರೆ ಈಗಿನ ಆಧುನಿಕ ಜೀವನ ಶೈಲಿಯನ್ನು ಕೈಬಿಡಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ಪ್ರದೇಶಕ್ಕೆ, ಬುಡಕಟ್ಟು ಹಾಡಿಗಳಿಗೆ ಹೋಗಿ ಅಲ್ಲಿನ ಜೀವನ ವಿಧಾನ, ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಕ್ಷೇತ್ರಾಧ್ಯಯನದಿಂದ ಮಾಡಿದ ಜಾನಪದ ಮಾತ್ರ ಜೀವಂತಿಕೆಯಿಂದ ಕೂಡಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ‘ಜನಪದ ಸಂಸ್ಕೃತಿ ಮತ್ತು ದೇವರು’ ಕುರಿತು ಮಾತನಾಡಿ, ‘ದೇವರ ನಂಬಿಕೆಯೇ ಜನಪದರ ಸತ್ವ. ಅವರ ದೃಷ್ಟಿಯಲ್ಲಿ ದೇವರೆಂದರೆ ಮನುಷ್ಯನಾಗಿರಬೇಕು. ಮನುಷ್ಯನೇ ದೇವರಾಗಿರಬೇಕು. ಮಾನವ ದೈತ್ಯವನ್ನು ನಾಶಪಡಿಸುವುದೇ ದೈವತ್ವದ ಸಂಕೇತವೆಂದು ನಂಬಿದವರು’ ಎಂದು ತಿಳಿಸಿದರು.

‘ಸಂಪನ್ಮೂಲಗಳ ಕಬಳಿಕೆಯ ಸಂಕೇತವಾಗಿದ್ದ ಶ್ರವಣ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದು ಮಹದೇಶ್ವರಸ್ವಾಮಿ. ನೊಂದವರ, ಕಾಯಕ ಜೀವಿಗಳ ರಕ್ಷಣೆಗೆ ನಿಂತವರೇ ಮಂಟೇಸ್ವಾಮಿ. ಇವರನ್ನೇ ಜನಪದರು ದೇವರೆಂದು ಆರಾಧಿಸಿದ್ದರು’ ಎಂದು ಅಭಿಪ್ರಾಯಪಟ್ಟರು.

ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸಿದ್ದರು. ‘ಜಾನಪದ ಮತ್ತು ಶಿಕ್ಷಣ’ ಕುರಿತು ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಉಪನ್ಯಾಸಕ ಎಂ.ಮಹಾಲಿಂಗ ವಿಷಯ ಮಂಡಿಸಿದರು.

ಮಲೆ ಮಹದೇಶ್ವರ ತಂಡದ ಕಲಾವಿದರಾದ ಶಂಭುಲಿಂಗಶೆಟ್ಟಿ, ನಾರಾಯಣಸ್ವಾಮಿ, ಸಿದ್ದೇಶ್‌, ಪ್ರದೀಪ್‌, ಸುಬ್ರಹ್ಮಣ್ಯ ರಾವ್‌, ಭೂಮಿಕಾ, ಪುರುಷೋತ್ತಮ ಕಿರಗಸೂರು ಜನಪದ ಗಾಯನ ನಡೆಸಿಕೊಟ್ಟರು.

ರಂಗಕರ್ಮಿ ಬಿ.ಎಂ.ರಾಮಚಂದ್ರ, ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳ ಕರೆಸ್ಪಾಂಡೆಂಟ್‌ ಎನ್‌.ಆರ್‌.ಮಂಜುನಾಥ, ಅಕಾಡೆಮಿಯ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಸದಸ್ಯ ಸಂಚಾಲಕ ಜಿ.ಆರ್‌.ಶ್ರೀವತ್ಸ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು