ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎಲ್‌ಐಸಿ ನೌಕರರಿಂದ ಮುಷ್ಕರ

ಬಂಡವಾಳ ಹಿಂತೆಗೆತದ ವಿರುದ್ಧ ಆಕ್ರೋಶ; ವಿಮಾ ವಹಿವಾಟು ಸ್ಥಗಿತ
Last Updated 19 ಮಾರ್ಚ್ 2021, 5:59 IST
ಅಕ್ಷರ ಗಾತ್ರ

ಮೈಸೂರು: ಬಂಡವಾಳ ಹಿಂತೆಗೆತದ ವಿರುದ್ಧ ದೇಶದಾದ್ಯಂತ ಕರೆ ನೀಡಲಾಗಿದ್ದ ಒಂದು ದಿನದ ಮುಷ್ಕರವನ್ನು ಗುರುವಾರ ನಗರದಲ್ಲಿ ಎಲ್‌ಐಸಿ ನೌಕರರು ಒಕ್ಕೊರಲಿನಿಂದ ಬೆಂಬಲಿಸಿದರು.

ಕೆಲಸದಿಂದ ದೂರ ಉಳಿದ ನೌಕರರು ಇಲ್ಲಿನ ಬನ್ನಿಮಂಟಪದ ಭಾರತೀಯ ಜೀವವಿಮಾ ನಿಗಮದ ವಲಯ ಕಚೇರಿ ಆವರಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಿಮಾ ವಹಿವಾಟು ನಗರದಲ್ಲಿ ಅಸ್ತವ್ಯಸ್ತಗೊಂಡಿತು.

ಎಲ್‌ಐಸಿಯಲ್ಲಿ ಬಂಡವಾಳ ಹಿಂತೆಗೆತವು ಖಾಸಗೀಕರಣದ ಮೊದಲ ಹೆಜ್ಜೆ ಎಂದು ಕಿಡಿಕಾರಿದ ನೌಕರರು, ಯಾವುದೇ ಕಾರಣಕ್ಕೂ ಬಂಡವಾಳವನ್ನು ವಾಪ‍ಸ್ ತೆಗೆಯುವುದು ಬೇಡ ಎಂದು ಒತ್ತಾಯಿಸಿದರು.

ಈಗಾಗಲೇ ಎಲ್‌ಐಸಿ ಲಾಭದಲ್ಲಿದೆ. ಬಂಡವಾಳವನ್ನು ವಾಪಸ್ ತೆಗೆದುಕೊಳ್ಳುವಂತಹ ಸ್ಥಿತಿ ಬಂದಿಲ್ಲ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು.

ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ. ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಸಾರ್ವಜನಿಕ ವಲಯದಲ್ಲಿರುವ ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಖಾಸಗೀಕರಣ ಮಾಡುವ ಬದಲು ವಿಮಾ ಕಂಪನಿಗಳಿಗೆ ಇನ್ನಷ್ಟು ಬಲ ತುಂಬಬೇಕು. ಒಂದು ವೇಳೆ ಖಾಸಗಿಯವರಿಗೆ ಒಪ್ಪಿಸಿದರೆ ಸೇವೆಗಿಂತ ಲಾಭವೇ ಪ್ರಧಾನವಾಗುತ್ತದೆ ಎಂದು ಅವರು ಹೇಳಿದರು.

ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿಯನ್ನು ಪಟ್ಟಿ ಮಾಡುವ ಹಾಗೂ ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸುವ ಪ್ರಸ್ತಾವಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಎಲ್‌ಐಸಿ ಕ್ಲಾಸ್ –1 ಅಧಿಕಾರಿಗಳ ಒಕ್ಕೂಟ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘ, ಅಖಿಲ ಭಾರತ ವಿಮಾ ನೌಕರರ ಸಂಘ, ಜೀವವಿಮಾ ನಿಗಮ ನೌಕರರ ಸಂಘ, ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ, ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ, ಕರ್ನಾಟಕ ರಾಜ್ಯ ವಿಭಾಗೀಯ ಘಟಕಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದವು.

ಮುಖಂಡರಾದ ನಾಗೇಶ್, ರಾಮು, ಸುರೇಶ್‌, ಬಾಲಾಜಿ, ನಿರಂಜನಮೂರ್ತಿ, ಪವಾರ್, ರಮೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT