ಶನಿವಾರ, ಅಕ್ಟೋಬರ್ 24, 2020
18 °C
ಕೋವಿಡ್‌–19 ಆತಂಕ ಲೆಕ್ಕಿಸದೇ ಸೇರುತ್ತಿರುವ ಸಾರ್ವಜನಿಕರು, ವಾಹನ ದಟ್ಟಣೆ

ದೀಪಾಲಂಕಾರ ವೀಕ್ಷಣೆ–ಜನದಟ್ಟಣೆ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹಾಗೂ ಮರಣ ಪ್ರಮಾಣ ಹೆಚ್ಚುತ್ತಿರುವ ಕಾರಣ ಈ ಬಾರಿ ದಸರಾ ಮಹೋತ್ಸವಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದ್ದರೆ, ಇತ್ತ ನಗರದ ರಸ್ತೆಗಳಲ್ಲಿ ಮಾತ್ರ ದೀಪಾಲಂಕಾರ ವೀಕ್ಷಣೆಗೆ ಜನದಟ್ಟಣೆ ನಿರ್ಮಾಣವಾಗುತ್ತಿದೆ.

ಅರಮನೆ ಸುತ್ತಮುತ್ತಲಿನ ವೃತ್ತಗಳು, ರಸ್ತೆಗಳಲ್ಲಿ ದೀಪಾಲಂಕಾರ ವೀಕ್ಷಿಸಲು ಭಾನುವಾರ ರಾತ್ರಿ ಸಾರ್ವನಿಕರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲದೇ, ವಾಹನ ದಟ್ಟಣೆ ಕೂಡ ಉಂಟಾಯಿತು.

ಕುಟುಂಬ ಸಮೇತರಾಗಿ ಬಂದವರು ದೀಪಾಲಂಕಾರದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಕೆಲವರು ಗುಂಪುಗುಂಪಾಗಿ ನಿಂತಿದ್ದರು. ಜನ ಹಾಗೂ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಚಾಮರಾಜ ಜೋಡಿ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಮರಗಳಿಗೆ ದೀಪಾಲಂಕಾರ ಮಾಡಲಾಗಿದೆ. ಚಾಮರಾಜ ವೃತ್ತ. ಕೆ.ಆರ್.ವೃತ್ತ, ಹಾರ್ಡಿಂಜ್‌ ವೃತ್ತಗಳನ್ನು ವಿದ್ಯುತ್‌ ಬಲ್ಬುಗಳಿಂದ ಅಲಂಕರಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನಾಡಹಬ್ಬದ ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿಗೆ ಮಾತ್ರ ಪ್ರವೇಶ ನೀಡುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸು ಮಾಡಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಖ್ಯಮಂತ್ರಿ ಕೂಡ ಸೂಚನೆ ನೀಡಿದ್ದಾರೆ.

ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಈ ಸಮಯದಲ್ಲಿ ದೀಪಾಲಂಕಾರ ಮಾಡಿರುವುದಕ್ಕೆ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹಾಗೂ ಶಾಸಕ ತನ್ವೀರ್‌ ಸೇಠ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಊರುತುಂಬಾ ದೀಪಾಲಂಕಾರ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಸಂಘ ಸಂಸ್ಥೆಗಳು ಕೂಡ ವಿರೋಧ ವ್ಯಕ್ತಪಡಿಸಿವೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ‘ದೀಪಾಲಂಕಾರದ ಬಗ್ಗೆ ಯಾವುದೇ ಗೊಂದಲ ಇಲ್ಲ. ಇದು ಉನ್ನತಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ. ಈ ಬಾರಿ 50 ಕಿ.ಮೀಗೆ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.

ಜಾಗೃತಿ: ದೀಪಾಲಂಕಾರದಲ್ಲೂ ಕೋವಿಡ್‌ ಮುನ್ನೆಚ್ಚರಿಕೆ ಸಂಬಂಧಿಸಿ ದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಬಲ್ಬುಗಳಲ್ಲಿ ಮಾಸ್ಕ್‌ ಧರಿಸಿದ ವ್ಯಕ್ತಿಯ ಪ್ರತಿಕೃತಿ ನಿರ್ಮಿಸಲಾಗಿದೆ. ಇಷ್ಟಾಗಿಯೂ ಜನ ಅಂತರ ಕಾಯ್ದು ಕೊಳ್ಳದೆ ವೀಕ್ಷಣೆಯಲ್ಲಿ ತೊಡಗಿದ್ದಾರೆ.

ಉದ್ಘಾಟಕರಿಗೆ ಇಂದು ಆಹ್ವಾನ

ದಸರಾ ಮಹೋತ್ಸವ ಉದ್ಘಾಟನೆಗೆ ಆಯ್ಕೆಯಾಗಿರುವ ಹೃದ್ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಮೈಸೂರು ಜಿಲ್ಲಾಡಳಿತದ ಪರವಾಗಿ ಸೋಮವಾರ ಅಧಿಕೃತ ಆಹ್ವಾನ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆಯ ನಿರ್ದೇಶಕರ ಕಚೇರಿಯಲ್ಲಿ ಬೆಳಿಗ್ಗೆ 11.30ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪಸಿಂಹ, ಶಾಸಕರಾದ ರಾಮದಾಸ್‌, ಎಲ್‌.ನಾಗೇಂದ್ರ ಮತ್ತು ಸ್ವಾಗತ ಸಮಿತಿ ಸದಸ್ಯರು ಫಲ ತಾಂಬೂಲ ನೀಡಿ ಆಹ್ವಾನಿಸಲಿದ್ದಾರೆ. ಈ ನಡುವೆ, ದಸರೆಗೆ ಬರುವಂತೆ ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರಿಗೂ ಸಚಿವರು ಆಹ್ವಾನ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು