ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ನಿಮಿಷ ಕಾರು ತಡೆದದ್ದೇ ಮಹಾಪರಾಧವಾಯಿತೇ ಸಚಿವರೇ?

ಸಚಿವ ಸಾ.ರಾ.ಮಹೇಶ್‌ ತಡೆದ ಕಾನ್‌ಸ್ಟೆಬಲ್ ಅಮಾನತು
Last Updated 27 ಮಾರ್ಚ್ 2019, 12:49 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್‌ ನಾಮಪತ್ರ ಸಲ್ಲಿಸುವ ವೇಳೆ ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ಅರ್ಧ ನಿಮಿಷ ತಡೆದ ಕುವೆಂಪು ನಗರ ಠಾಣೆ ಹೆಡ್‌ಕಾನ್‌ಸ್ಟೆಬಲ್ ವೆಂಕಟೇಶ್ ಅವರನ್ನು ಅಮಾನತುಗೊಳಿಸಲಾಗಿದೆ.

ನಗರದ ಜೆಎಲ್‌ಬಿ ರಸ್ತೆಗೆ ಹೊಂದಿಕೊಂಡಂತಿರುವ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದ ಬಳಿ ಬ್ಯಾರಿಕೇಡ್‌ ಹಾಕಲಾಗಿತ್ತು. ಸಾ.ರಾ.ಮಹೇಶ್ ಕಾರು ತಡೆದ ಕಾನ್‌ಸ್ಟೆಬಲ್ ಕಿಟಕಿ ಗಾಜು ಇಳಿಸಿ ಸಚಿವರ ಮುಖ ನೋಡಿ, ಒಳಗೆಷ್ಟು ಮಂದಿ ಇದ್ದಾರೆ ಎಂದು ಖಚಿತಪಡಿಸಿಕೊಂಡ ಬಳಿಕ ಬಿಟ್ಟಿದ್ದಾರೆ. ಇದಕ್ಕೆ ಸುಮಾರು ಅರ್ಧ ನಿಮಿಷ ಹಿಡಿದಿದೆ.

ಇದರಿಂದ ಕೋಪಗೊಂಡ ಸಾ.ರಾ.ಮಹೇಶ್, ಕಾರಣ ಇಲ್ಲದೆ ತಡೆದಿದ್ದು ಸರಿ ಇಲ್ಲ ಎಂದು ಸ್ಥಳದಲ್ಲೇ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಬಳಿಕ ಕಾನ್‌ಸ್ಟೆಬಲ್ ಮೇಲೆ ಕ್ರಮ ಕೈಗೊಳ್ಳಲು ಮೌಖಿಕ ಸೂಚನೆ ನೀಡಿದರು ಎನ್ನಲಾಗಿದೆ.ದೇವರಾಜ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ಅವರಿಂದ ವರದಿ ಪಡೆದು ಡಿಸಿಪಿ ಮುತ್ತುರಾಜ್ ಅಮಾತುಮಾಡಿ ಆದೇಶಿಸಿದ್ದಾರೆ.

‘ಒಬ್ಬ ಅಭ್ಯರ್ಥಿ ಜತೆ ಮೂರು ವಾಹನಗಳು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಕಾನ್‌ಸ್ಟೆಬಲ್‌ ತಡೆದಿರುವುದು ತಪ್ಪು. ಹೀಗಾಗಿ, ಅಮಾನತು ಮಾಡಲಾಗಿದೆ’ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದರು.

ಆಗ ದಿವ್ಯಾ ಗೋಪಿನಾಥ್ ಕಣ್ಣೀರು ಹಾಕಿದ್ದರು

ತುಮಕೂರಿನಲ್ಲಿ ಜ.23ರಂದು ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿ ಅವರ ಕ್ರಿಯಾ ಸಮಾಧಿಯ ವಿಧಿ ವಿಧಾನ ವೀಕ್ಷಿಸಲು ಬಂದಿದ್ದ ಸಚಿವ ಸಾ.ರಾ.ಮಹೇಶ್ ಅವರನ್ನು ತುಮಕೂರಿನಲ್ಲಿ ಈ ಹಿಂದೆಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ದಿವ್ಯಾ ಗೋಪಿನಾಥ್ ತಡೆದಿದ್ದರು. ನಂತರ ಸಚಿವರ ನಿಂದನೆ ಸಹಿಸಲಾಗದೆ ಕಣ್ಣೀರಿಟ್ಟಿದ್ದರು. ಇದು ದೊಡ್ಡ ವಿವಾದವೇ ಆಗಿ, ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರ ಪರ ಬ್ಯಾಟಿಂಗ್ ಮಾಡಿದ್ದರು.

ಸಚಿವರ, ಮುಖ್ಯಮಂತ್ರಿಯ ಈ ನಡೆಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು. ತಮ್ಮ ಕಾರ್ಯವೈಖರಿಸಿ ಸಮರ್ಥಿಸಿಕೊಂಡಿದ್ದ ಪೊಲೀಸ್ ಅಧಿಕಾರಿದಿವ್ಯಾ ಗೋಪಿನಾಥ್, ‘ಗದ್ದುಗೆಯ ಸ್ಥಳ ಚಿಕ್ಕದಾಗಿತ್ತು. ಒಳಗೆ ಯಾರು ಯಾರನ್ನು ಬಿಡಬೇಕು ಅಲ್ಲಿಗೆ ಯಾರು ಹೋಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಲಾಗಿತ್ತು. ನಮ್ಮ ಕರ್ತವ್ಯ ಏನಿರುತ್ತದೆಯೋ ಅದನ್ನು ನಾವು ಮಾಡುತ್ತೇವೆ.ಸಚಿವರನ್ನುತಡೆದಿದ್ದು ನಿಜ. ಅವರು ಸಚಿವರು ಎಂದು ತಿಳಿದ ಮೇಲೆ ಒಳಗೆ ಬಿಟ್ಟೆವು. ಅವರು ಅಷ್ಟರಲ್ಲಿ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಲಕ್ಷಾಂತರ ಜನರು ಬರುವಾಗ ಕೆಲವರಿಗೆ ತೊಂದರೆಗಳು ಆಗುತ್ತವೆ. ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು ಆಗಲಿ ಎಂದು ನಾವು ಚಿಂತಿಸುತ್ತೇವೆ’ ಎಂದು ಹೇಳಿದ್ದರು.

ಆದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತ್ರ, ‘ಮಂತ್ರಿಗಳನ್ನೇ ಅವಮಾನಿಸಿದರೆ ಅದು ನನ್ನನ್ನೂ ಅವಮಾನಿಸಿದಂತೆ’ ಎಂದು ಸಚಿವರ ಬೆನ್ನಿಗೆ ನಿಂತಿದ್ದರು. ‘ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರದ ವೇಳೆ ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಂತೆಂಥವರನ್ನೋ ಒಳಗೆ ಬಿಟ್ಟಿದ್ದಾರೆ. ನಮ್ಮ ಸಚಿವರನ್ನು ಒಳಗೆ ಬಿಟ್ಟಿಲ್ಲ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ತಿದ್ದಿ ಹೇಳಬೇಕು. ಮಹೇಶ್‌ ಹಾಗೆ ಹೇಳಿದ್ದಾರೆ’ ಎಂದು ಸಚಿವರನ್ನು ಸಮರ್ಥಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT