ಸೋಮವಾರ, ಸೆಪ್ಟೆಂಬರ್ 27, 2021
25 °C

ಬನ್ನೂರು: ಮಾಕನಹಳ್ಳಿ ಹೆಗ್ಗೆರೆಗೆ ಒತ್ತುವರಿ ಕಾಟ, ಕೆರೆ ಅಭಿವೃದ್ಧಿಗೆ ಜನರ ಆಗ್ರಹ

ಬಿ.ಆರ್. ವಿಜೇಂದ್ರ ಪ್ರಭು Updated:

ಅಕ್ಷರ ಗಾತ್ರ : | |

Prajavani

ಬನ್ನೂರು: ಪಟ್ಟಣ ಸಮೀಪದ ಮಾಕನಹಳ್ಳಿ ಗ್ರಾಮದ ಹೆಗ್ಗೆರೆ ಮೈಸೂರು ಭಾಗದಲ್ಲೇ ಅತಿದೊಡ್ಡ ಕೆರೆಗಳಲ್ಲಿ ಒಂದು. ಇದು 462 ಎಕರೆಯಷ್ಟು ವಿಸ್ತಾರವಾಗಿದ್ದು, ರೈತರ ಜೀವನಾಡಿಯಾಗಿದೆ.

ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೆಗ್ಗೆರೆಗೆ ನೀರು ಹರಿಸಲಾಗುತ್ತದೆ. ಈ ಕೆರೆಯಿಂದ ಮಾಕನಹಳ್ಳಿ, ಮಾದಿಗಹಳ್ಳಿ, ಭುಗತಹಳ್ಳಿ, ಬೀಡನಹಳ್ಳಿ ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಎಡ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿಯ ರೈತರಿಗೆ ವರ್ಷಕ್ಕೆ ಒಂದು ಬಾರಿ ಭತ್ತ ಬೆಳೆಯಲು ನೀರು ಹರಿಸಲಾಗುತ್ತದೆ. ಅರೆಕಾಲಿಕ ಬೆಳೆಯಾಗಿ ರಾಗಿ, ಜೋಳ, ಕಡಲೆ ಮುಂತಾದ ಬೆಳೆಗಳಿಗೂ ನೀರು ಪೂರೈಸಲಾಗುತ್ತದೆ.

ಇದರ ಜತೆಗೆ, ಸಿಡಿಎಸ್‌ ನಾಲೆಯ ಸುಮಾರು 18 ಕಿ.ಮೀ. ವ್ಯಾಪ್ತಿಯ ಹೊರಳಹಳ್ಳಿಯವರೆಗೂ ಅರೆಕಾಲಿಕ ಬೆಳೆಗಳಿಗೆ ನೀರು ಒದಗಿಸಲಾಗುತ್ತಿದೆ. ಈ ಭಾಗದ 3,600 ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಿದೆ.

ಒತ್ತುವರಿ ಸಮಸ್ಯೆ: ‘ದೊಡ್ಡ ಕೆರೆ’ ಎಂಬ ವಿಶೇಷತೆ ಹೊಂದಿದ್ದರೂ ಈ ಕೆರೆಗೆ ಒತ್ತುವರಿ ಸಮಸ್ಯೆ ತಲೆದೋರಿದೆ. 100 ಎಕರೆ‌ಗೂ ಹೆಚ್ಚು ಜಾಗ ಒತ್ತುವರಿಯಾಗಿದೆ. ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಬನ್ನೂರು ವಿಧಾನಸಭಾ ಕ್ಷೇತ್ರದ ಕೊನೇ ಶಾಸಕಿ ಸುನೀತಾ ವೀರಪ್ಪಗೌಡ ಅವರ ಅವಧಿಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಸರ್ವೆ ಮಾಡಿ ಗಡಿ ಗುರುತಿಸಲಾಗಿತ್ತು. ಹೂಳು ಎತ್ತುವ ಕಾಮಗಾರಿಯೂ ಆರಂಭವಾಗಿತ್ತು. ಆದರೆ, ಅಂದಿನ ರಾಜಕೀಯ ಬೆಳವಣಿಗೆಗಳಿಂದ ಈ ಕೆಲಸವೂ ನನೆಗುದಿಗೆ ಬಿತ್ತು.

ಎಚ್‌.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಹೆಗ್ಗೆರೆಯಲ್ಲಿ ವಾಯುವಿಹಾರಿಗಳ ಅನುಕೂಲಕ್ಕಾಗಿ ನಡಿಗೆ ಪಥ ನಿರ್ಮಿಸಲಾಗಿತ್ತು. ಕೆರೆಯ ಏರಿ ಮೇಲೆ ಬೀಡನಹಳ್ಳಿ ಸಂಪರ್ಕಿಸುವ ರಸ್ತೆಯವರೆಗೂ ಟೈಲ್ಸ್‌ ಹಾಕಲಾಗಿತ್ತು. ಜತೆಗೆ ಆಲಂಕಾರಿಕ ಗಿಡಗಳನ್ನೂ ನೆಡಲಾಗಿತ್ತು. ಆದರೆ, ಕೆಲವೆಡೆ ಟೈಲ್ಸ್‌ಗಳು ಕಿತ್ತುಬಂದಿವೆ. ಇವುಗಳನ್ನು ಕೆಲವರು ತಮ್ಮ ಮನೆಗಳಿಗೆ ಕೊಂಡೊಯ್ದಿದ್ದಾರೆ. ಇದರಿಂದ ವಾಯುವಿಹಾರಿಗಳಿಗೆ ತೊಂದರೆ ಉಂಟಾಗಿದೆ.

ಕೆರೆಯ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ವಿಷಜಂತುಗಳ ಕಾಟ ಹೆಚ್ಚಾಗಿದೆ. ಕೆರೆಯಂಗಳದಲ್ಲೂ ಕಳೆಗಿಡಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ವಾಯುವಿಹಾರಿಗಳು ಆಗ್ರಹಿಸಿದ್ದಾರೆ.

‘ಹೆಗ್ಗೆರೆಯಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಬಹುದು. ಆದರೆ, ಒತ್ತುವರಿ ಸಮಸ್ಯೆ ಹಾಗೂ ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೆರೆಯನ್ನು ಉಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮಾದಿಗಹಳ್ಳಿ ಗ್ರಾಮಸ್ಥ ಡೇರಿ ಸೋಮು ಆಗ್ರಹಿಸಿದ್ದಾರೆ.

‘ಈ ಹಿಂದೆ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಆಗ ಅಲ್ಲಲ್ಲಿ ದೊಡ್ಡ ಗಾತ್ರದ ಹಳ್ಳಗಳು ನಿರ್ಮಾಣವಾಗಿದ್ದವು. ಇದರಿಂದ ಜಲಮೂಲಕ್ಕೆ ಧಕ್ಕೆ ಉಂಟಾಗಿದೆ. ಒತ್ತುವರಿ ತೆರವುಗೊಳಿಸುವ ಜತೆಗೆ, ಹೂಳು ತೆಗೆಯಬೇಕು. ಕೆರೆಯ ಸೌಂದರ್ಯವನ್ನು ಹೆಚ್ಚಿಸಬೇಕು ಎಂದು ರೈತ ಮುಖಂಡ ಬನ್ನೂರು ನಾರಾಯಣ್‌ ಒತ್ತಾಯಿಸಿದ್ದಾರೆ.

ತೆಪ್ಪೋತ್ಸವ: ಅಭಿವೃದ್ಧಿಗೆ ಆಗ್ರಹ

ಈ ಭಾಗದಲ್ಲಿ ಬನ್ನೂರಿನ ಅಧಿದೇವತೆ ಹೇಮಾದ್ರಾಂಬ ದೇವಿಯ ಜಾತ್ರಾ ಮಹೋತ್ಸವ ಪ್ರಸಿದ್ಧಿ ಪಡೆದಿದೆ. ದೇವಿಯ ತೆಪ್ಪೋತ್ಸವ ಈ ಹೆಗ್ಗೆರೆಯಲ್ಲೇ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ಇಂತಹ ಪ್ರಸಿದ್ಧ ತಾಣವಾಗಿರುವ ಈ ಕೆರೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ಜನರ ಆಗ್ರಹ.

‘ಸರ್ವೆ ನಡೆಸಲು ಪತ್ರ’

‘ಎರಡು ವರ್ಷಗಳ ಹಿಂದೆ ಸರ್ವೆ ಮಾಡಿ ಒತ್ತುವರಿ ತೆರವಿಗೆ ಮುಂದಾಗಿದ್ದೆವು. ಆದರೆ, ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ ಬೇಸಿಗೆಯಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೆವು. ಆಗ ಈ ಭಾಗದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಪುನಃ ಸರ್ವೆ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಎಇ ಮಂಜು ಎಸ್‌.ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆಯನ್ನು ಪ್ರವಾಸಿ ತಾಣವಾಗಿ ರೂಪಿಸಲು ಸಾಧ್ಯವಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.

-ಬನ್ನೂರು ನಾರಾಯಣ್‌, ರೈತ ಮುಖಂಡ

100 ಎಕರೆ ಮೇಲ್ಪಟ್ಟ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಹೆಗ್ಗೆರೆಯನ್ನು ಆ ಇಲಾಖೆಯೇ ಅಭಿವೃದ್ಧಿಪಡಿಸಬೇಕು.

-ಮಹದೇವ, ಪುರಸಭೆ ಮುಖ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು