ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಾವಿಗೆ ಧಾರಣೆಯಿದೆ, ಗಿಡದಲ್ಲಿ ಫಸಲಿಲ್ಲ

ಮಾವಿನ ತೋಪುಗಳಿಗೆ ದಲ್ಲಾಳಿಗಳ ದಾಂಗುಡಿ: ರಸ್ತೆ ಬದಿಯೂ ಆರಂಭವಾಗಲಿರುವ ಮಂಡಿ
Last Updated 20 ಏಪ್ರಿಲ್ 2021, 3:06 IST
ಅಕ್ಷರ ಗಾತ್ರ

ಮೈಸೂರು: ಹಲವು ಸಂಕಷ್ಟಗಳ ನಡುವೆಯೂ ಮಾರುಕಟ್ಟೆಯಲ್ಲಿ ಮಾವಿಗೆ ಹಿಂದಿನ ವರ್ಷಕ್ಕಿಂತಲೂ ಉತ್ತಮ ಧಾರಣೆಯಿದೆ. ಆದರೆ, ಗಿಡಗಳಲ್ಲಿ ಈ ಬಾರಿ ಫಸಲು ಅಷ್ಟಿಲ್ಲದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.

ಹಿಂದಿನ ವರ್ಷ ಮಾವಿನ ಮರಗಳು ಭರ್ಜರಿ ಫಸಲು ಬಿಟ್ಟಿದ್ದವು. ಕೋವಿಡ್‌ನ ಲಾಕ್‌ಡೌನ್‌ನಿಂದ ವಹಿವಾಟು ನಡೆಯಲಿಲ್ಲ. ಗುತ್ತಿಗೆ ಪಡೆದಿದ್ದ ವ್ಯಾಪಾರಿಗಳು ಸಹ ತೋಪಿನತ್ತ ತಲೆ ಹಾಕಲಿಲ್ಲ. ಮರದಲ್ಲೇ ಮಾವು ಉಳಿದಿದ್ದರಿಂದ ಬಹುತೇಕ ಬೆಳೆಗಾರರಿಗೆ ನಷ್ಟ ಉಂಟಾಗಿತ್ತು.

ಇದೀಗ ಕೋವಿಡ್‌ನ ಎರಡನೇ ಅಲೆಯ ಅಬ್ಬರ ಜೋರಿದೆ. ಆತಂಕದ ನಡುವೆಯೂ ದಲ್ಲಾಳಿಗಳು, ವ್ಯಾಪಾರಿಗಳು ಮಾವಿನ ಮರದ ಗುತ್ತಿಗೆ ಪಡೆಯಲು, ಕಾಯಿ ಖರೀದಿಗಾಗಿ ಜಿಲ್ಲೆಯಲ್ಲಿರುವ ಮಾವಿನ ತೋಪುಗಳಿಗೆ ದಾಂಗುಡಿಯಿಡುತ್ತಿದ್ದಾರೆ. ಇದರಲ್ಲಿ ಹೊರ ರಾಜ್ಯ, ಜಿಲ್ಲೆಯ ವಹಿವಾಟುದಾರರು ಇದ್ದಾರೆ.

‘ಜಯಪುರ, ಇಲವಾಲ, ಬೀರಿಹುಂಡಿ ಸೇರಿದಂತೆ ಮತ್ತಿತರೆಡೆ ರಸ್ತೆ ಬದಿಯೇ ಮಾವಿನ ಮಂಡಿ ಆರಂಭಿಸುವ ಸಿದ್ಧತೆಯೂ ಜೋರಾಗಿದೆ. ಒಟ್ಟಾರೆ ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ದರವೂ ಹೆಚ್ಚಿದೆ. ಆದರೆ, ಗಿಡಗಳಲ್ಲಿ ಫಸಲಿಲ್ಲ. ಈಗಿರುವ ಉತ್ಪನ್ನ ಜಿಲ್ಲೆಯ ಬೇಡಿಕೆಗಷ್ಟೇ ಸಾಕಾಗಬಹುದು. ವ್ಯಾಪಾರಿಗಳು ಖರೀದಿಯ ದರ ಹೆಚ್ಚಿಸಿದರೂ ನಮ್ಮಲ್ಲಿ ಮಾರಾಟ ಮಾಡಲು ಮಾವು ಇಲ್ಲ’ ಎನ್ನುತ್ತಾರೆ ಜಿಲ್ಲೆಯ ಬೆಳೆಗಾರರು.

‘ಎರಡ್ಮೂರು ವರ್ಷದಿಂದ ಮಾವು ಬೆಳೆಗಾರರ ಸಂಕಷ್ಟ ತಪ್ಪದಾಗಿದೆ. ಹಿಂದಿನ ವರ್ಷ ಕೋವಿಡ್‌ನ ಹೊಡೆತ. ಅದರ ಹಿಂದಿನ ವರ್ಷ ಮಳೆಯಿಂದಾದ ಹಾನಿ. ಈ ವರ್ಷವೂ ಬೆಳೆಗಾರನಿಗೆ ನಿರೀಕ್ಷಿತ ಫಸಲು ಸಿಗದಾಗಿದೆ. ಹಿಂದಿನ ವರ್ಷ ಮಳೆ ಚೆನ್ನಾಗಿ ಸುರಿದಿದ್ದರಿಂದ ಮಾವಿನ ಗಿಡಗಳು ಚಿಗುರಿದ್ದವು. ಆದರೆ, ಹೂವು ಬಿಟ್ಟಿರಲಿಲ್ಲ. ಕಾಯಿ ಕಟ್ಟಲಿಲ್ಲ. ಇದರಿಂದ ಇಳುವರಿ ಅಷ್ಟಕ್ಕಷ್ಟೇ’ ಎನ್ನುತ್ತಾರೆ ಎಚ್‌.ಡಿ.ಕೋಟೆ ತಾಲ್ಲೂಕಿನ ಕಣಿಯನಹುಂಡಿ ಗ್ರಾಮದ ಮಾವು ಬೆಳೆಗಾರ ಕೆ.ಎಂ.ಅನುರಾಜ್‌.

‘ನಮ್ಮಲ್ಲಿ 300 ಮಾವಿನ ಗಿಡಗಳಿವೆ. ಡಿಸೆಂಬರ್‌ ಫಸಲು ಇಲ್ಲವೇ ಇಲ್ಲ. ಎರಡನೇ ಫಸಲು ಪರವಾಗಿಲ್ಲ. 2.5 ಟನ್‌ನಿಂದ 3 ಟನ್‌ ಮಾವು ಸಿಕ್ಕರೆ ನನ್ನ ಪುಣ್ಯ’ ಎಂದರು ಅನುರಾಜ್‌.

ನಿರ್ವಹಣೆ ವೆಚ್ಚ ಸಿಕ್ಕರೆ ಸಾಕು

‘ಮರವೊಂದರ ವಾರ್ಷಿಕ ನಿರ್ವಹಣೆಯ ವೆಚ್ಚ ₹300ರಿಂದ ₹500ರ ಆಸುಪಾಸಿನಲ್ಲಿ ಇರಲಿದೆ. ಗೊಬ್ಬರ, ಉಳುಮೆ, ಔಷಧಿಗಾಗಿ ಖರ್ಚು ಮಾಡಲೇಬೇಕು. ಈ ಬಾರಿ ವಾರ್ಷಿಕ ನಿರ್ವಹಣೆಯ ಜೊತೆಗೆ, ಮುಂದಿನ ವರ್ಷದ ಚಟುವಟಿಕೆಗೆ ಕಾಸಾದರೆ ಸಾಕು’ ಎನ್ನುತ್ತಾರೆ ಮಾವು ಬೆಳೆಗಾರರಾದ ಎಸ್‌.ಪುಟ್ಟೇಗೌಡ, ಸಿರಿಸ್ವಾಮಿಗೌಡ.

‘ಮಾವು ಎರಡು ವರ್ಷಕ್ಕೊಮ್ಮೆ ಫಸಲು ಬರುವುದು. ಹೋದ ಬಾರಿ ಫಸಲಿತ್ತು. ಧಾರಣೆ ಸಿಗಲಿಲ್ಲ. ಈ ಬಾರಿ ಬೆಲೆಯಿದೆ. ಫಸಲಿಲ್ಲ. ಬೆಳೆಗಾರರ ಹಣೆಬರಹವಿಷ್ಟೇ’ ಎಂದು ಜಯಣ್ಣ ಬೇಸರ ವ್ಯಕ್ತಪಡಿಸಿದರು.

ಅಂಕಿ–ಅಂಶ

4 ಸಾವಿರ - ಹೆಕ್ಟೇರ್‌ಗೂ ಹೆಚ್ಚು ಮಾವು ಜಿಲ್ಲೆಯಲ್ಲಿ

7 ಸಾವಿರ - ಮೆಟ್ರಿಕ್‌ ಟನ್‌ ಹಣ್ಣಿನ ನಿರೀಕ್ಷೆ

₹ 80ರಿಂದ ₹ 120 - 1 ಕೆ.ಜಿ. ಬಾದಾಮಿ ಮಾವಿನ ಬೆಲೆ ರೈತರಿಗೆ ಸಿಗ್ತಿರೋದು

₹ 30ರಿಂದ ₹ 45 - ಸಿಂಧೂರ ಮಾವಿನ 1 ಕೆ.ಜಿ ಧಾರಣೆ

₹ 50ರಿಂದ ₹ 60 - ರಸಪೂರಿ ಮಾವಿನ 1 ಕೆ.ಜಿ. ಧಾರಣೆ ರೈತರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT