ಮೈಸೂರು: ‘ಮೈಕ್ ಚಂದ್ರು’ ಎಂದೇ ಖ್ಯಾತರಾಗಿದ್ದ ಪ್ರಚಾರ ಕಲಾವಿದ ಎನ್.ಚಂದ್ರಶೇಖರ್ (71) ಇಲ್ಲಿನ ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಭಾನುವಾರ ನಿಧನರಾದರು.
ಇವರಿಗೆ ಪತ್ನಿ ಸುಲೋಚನಾ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನ ಹರಿಶ್ಚಂದ್ರಘಾಟ್‌ನಲ್ಲಿ ನೆರವೇರಿತು.
ಈ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಕಳೆದ 50 ವರ್ಷಗಳಿಂದಲೂ ಕೇಳಿ ಬರುತ್ತಿದ್ದ ಕಂಚಿನ ಕಂಠದ ಧ್ವನಿಯೊಂದು ದೀರ್ಘ ಮೌನಕ್ಕೆ ಜಾರಿತು.
ತಿ.ನರಸೀಪುರದ ಮೈಕ್ ಚಂದ್ರು ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ನಂತರ, ಅವರು ಬದುಕಿಗಾಗಿ ಆಯ್ಕೆ ಮಾಡಿಕೊಂಡಿದ್ದು, ನಿರೂಪಣೆ ಮತ್ತು ಪ್ರಚಾರ ವೃತ್ತಿ. ಕೇವಲ ಇದೊಂದೇ ಕೆಲಸದ ಮೂಲಕ ತಮ್ಮ ಬದುಕನ್ನು ನಿರ್ವಹಣೆ ಮಾಡಿದ ಅಪರೂಪದ ಕಲಾವಿದ ಎಂಬ ಶ್ರೇಯಕ್ಕೆ ಪಾತ್ರರಾದರು.
ಸುಂದರಕೃಷ್ಣ ಅರಸ್ ನಿರ್ದೇಶನದ ‘ಅಳಿಯ ದೇವರು’, ಪರ್ವತವಾಣಿ ಅವರ ‘ಹಗ್ಗದ ಜೀವಾಳ’, ಜಿ.ಪಿ.ರಾಜರತ್ನಂ ಅವರ ‘ಸೋಲಿಗರ ಸಿದ್ಧ’ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅವರು, ಹವ್ಯಾಸಿ ತಂಡಗಳಾದ ಸಮತೆಂತೋ, ಅಮರ ಕಲಾಸಂಘ, ಕಲಾಪ್ರಿಯಾ, ಸಮುದಾಯ ತಂಡಗಳಲ್ಲಿ ಸಕ್ರಿಯರಾಗಿದ್ದರು. ಗುಬ್ಬಿ ಕಂಪನಿ, ಶ್ರೀಕಂಠೇಶ್ವರ ಮಿತ್ರ ಮಂಡಳಿ, ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿಗಳಲ್ಲಿಯೂ ಅವಿರತವಾಗಿ ದುಡಿದಿದ್ದಾರೆ.
ಆರಂಭದಲ್ಲಿ ಸೈಕಲ್‌ಗೆ ಸ್ಪೀಕರ್ ಕಟ್ಟಿಕೊಂಡು, ಕೈಯಲ್ಲಿ ಮೈಕ್ ಹಿಡಿದು ಪ್ರಸಾರ ಮಾಡಿದ ಇವರು, ನಂತರ ಟಾಂಗಾ ಮತ್ತು ಆಟೊಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ತಮಿಳು, ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ನಿರೂಪಣೆ ಮಾಡುತ್ತಿದ್ದ ಅವರು, ಗೋಕಾಕ್ ಮತ್ತು ಕಾವೇರಿ ಚಳವಳಿಗಳಲ್ಲಿ ಭಾಗಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.