ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ವೇಳೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು: ಸಚಿವ ಬೈರತಿ

ಪಾಲಿಕೆ, ಮುಡಾ ಅಧಿಕಾರಿಗಳೊಂದಿಗೆ ಸಭೆ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚನೆ
Last Updated 8 ಜುಲೈ 2022, 10:37 IST
ಅಕ್ಷರ ಗಾತ್ರ

ಮೈಸೂರು: ‌‌‘ಮಳೆಗಾಲದಲ್ಲಿ ಹಳ್ಳದ ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಳ್ಳುವ ಮೊದಲು ಪಾಲಿಕೆ ಎಚ್ಚರವಹಿಸಬೇಕು. 24 ಗಂಟೆ ಸ್ಪಂದಿಸುವ ಟಾಸ್ಕ್‌ಫೋರ್ಸ್‌ ಸಮಿತಿಯನ್ನು ರಚಿಸಿ ಕೆಲಸ ನಿರ್ವಹಿಸಬೇಕು. ದಸರಾ ವೇಳೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚಿಸಿದರು.

ಪಾಲಿಕೆಯಲ್ಲಿ ಶುಕ್ರವಾರ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಮಳೆಗಾಲದಲ್ಲಿ ಹಸಿರೀಕರಣ ನಡೆಸಬೇಕು. ಉದ್ಯಾನ ನಗರಿಯಾದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ. ಕಚೇರಿಗಳಲ್ಲಿ ಕೂರದೇ ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಬಗೆಹರಿಸಿ’ ಎಂದು ನಿರ್ದೇಶನ ನೀಡಿದರು.

‘ನಗರಗಳು ವಿಸ್ತಾರಗೊಳ್ಳುತ್ತಿದ್ದಂತೆ ಹಸಿರು ಕಡಿಮೆಯಾಗುತ್ತದೆ. ಈ ಮಳೆಗಾಲದಲ್ಲೇ ಗಿಡ ನೆಡುವ ಅಭಿಯಾನ ಆರಂಭಿಸಿದರೆ, ಇನ್ನೆರಡು ವರ್ಷದಲ್ಲೇ ಉತ್ತಮ ‌ಫಲ ಸಿಗಲಿದೆ. ಚರಂಡಿ ನೀರನ್ನು ಶುದ್ಧೀಕರಿಸಿ ಅದನ್ನು ಉದ್ಯಾನ ನಿರ್ವಹಣೆಗೆ ಉಪಯೋಗಿಸುವತ್ತ ಯೋಚಿಸಬೇಕು. ಆದಾಯ ಸಂಗ್ರಹಣೆ ಹೆಚ್ಚಳದತ್ತಲು ನಿಗಾವಹಿಸಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿ, ‘ತೆರಿಗೆ ಸಂಗ್ರಹವು ಕಳೆದ ಬಾರಿ ₹ 162 ಕೋಟಿಯಿತ್ತು. ಈ ಬಾರಿ ಶೇ 35 ರಷ್ಟು ಹೆಚ್ಚಳ ಕಂಡಿದ್ದು, ಕಳೆದ ಮೂರು ತಿಂಗಳಲ್ಲಿ ₹ 104 ಕೋಟಿ ಬಂದಿದೆ. ಉದ್ದಿಮೆ ಪರವಾನಗಿಯಿಂದ ಈ ಬಾರಿ ₹ 8 ಕೋಟಿ ಸಂಗ್ರಹಿಸಲಾಗಿದ್ದು, ₹ 12 ಕೋಟಿ ಸಂಗ್ರಹದ ಗುರಿಯಿದೆ.ಪಾಲಿಕೆಯ ಆದಾಯ ಸಂಗ್ರಹವು ದ್ವಿಗುಣ ಗೊಂಡಿದೆ’ ಎಂದು ಮಾಹಿತಿ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರ ಕಂದಾಯ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿದ್ದು, ಅವುಗಳಿಗೆ ಬಿ ಖಾತಾ ನೀಡಲು ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಶುಲ್ಕ ನೀಡದವರ ಸಂಪರ್ಕ ಕಡಿತಗೊಳಿಸಲಾಗಿದ್ದರಿಂದ ತಿಂಗಳಿಗೆ 2 ಸಾವಿರ ಹೊಸ ಸಂಪರ್ಕದ ಅರ್ಜಿಗಳು ಬರುತ್ತಿವೆ’ ಎಂದರು.

‘ಬಿ ಖಾತಾ ನೀಡಲು ಸರ್ಕಾರ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ಕಾರ್ಯದರ್ಶಿಗಳಿಗೆ ಅಧಿಸೂಚನೆ ಹೊರಡಿಸಲು ಹೇಳಲಾಗಿದೆ. ಈ ನಿರ್ಣಯದಿಂದ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗಲಿದೆ’ ಎಂದು ಸಚಿವರು ಹೇಳಿದರು.

ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್ ಮಾತನಾಡಿ, ‘ಮುಡಾ ಬಡಾವಣೆಗಳಲ್ಲಿ 102 ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಗುಂಪು ವಸತಿ ಯೋಜನೆಯಡಿ ವಿಜಯನಗರ ನಾಲ್ಕನೇ ಹಂತ, ದಟ್ಟಗಳ್ಳಿಯಲ್ಲಿ ₹ 341 ಕೋಟಿ ವೆಚ್ಚದಲ್ಲಿ 952 ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಕಟ್ಟಡ ಕಾಮಗಾರಿಯನ್ನು ಡಿಸೆಂಬರ್ ನಂತರ ಮಾಡಿ, ಈಗ ಮೂಲಸೌಕರ್ಯ ಕಾಮಗಾರಿಗಳನ್ನಷ್ಟೇ ನಡೆಸಿ’ ಎಂದು ಸಚಿವ ಬೈರತಿ ಬಸವರಾಜ ಸಲಹೆ ನೀಡಿದರು.

‘ರಾಜವಂಶಸ್ಥರ ಮನವೊಲಿಸಲಾಗುವುದು’: ‘ದೇವರಾಜ ಮಾರುಕಟ್ಟೆ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಬಂದಿದೆ. ರಾಜವಂಶಸ್ಥರನ್ನು ಮನವೊಲಿಸಿಯೇ ಕಾಮಗಾರಿ ಆರಂಭಿಸಲಾಗುವುದು. ನಗರದಲ್ಲಿ 130ಕ್ಕೂ ಹೆಚ್ಚು ಅಪಾಯದ ಕಟ್ಟಡಗಳಿದ್ದು, ಅವುಗಳಲ್ಲಿ ಖಾಸಗಿ ಕಟ್ಟಡಗಳೂ ಇವೆ. ಅವಘಡ ಸಂಭವಿಸದಂತೆ ವಹಿಸುವಂತೆ ಪಾಲಿಕೆಗೆ ಸೂಚಿಸಲಾಗಿದೆ’ ಎಂದು ಸಚಿವ ಬೈರತಿ ಬಸವರಾಜ ಹೇಳಿದರು.

ಬೃಹತ್‌ ಮೈಸೂರು; ಚರ್ಚೆ ಇಲ್ಲ: ‘ಬೃಹತ್‌ ಮೈಸೂರು ರಚನೆಯ ಬಗ್ಗೆ ಚರ್ಚೆ ನಡೆದಿಲ್ಲ. ದಸರಾ ಬರುತ್ತಿರುವುದರಿಂದ ರಿಂಗ್ ರಸ್ತೆ, ನಗರದೆಲ್ಲೆಡೆ ಎಲ್‌ಇಡಿ ದೀಪ ಅಳವಡಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಿ’: ‘ಪೌರಕಾರ್ಮಿಕರ ಎಲ್ಲ ಬೇಡಿಕೆಯನ್ನು ಹಂತ ಹಂತವಾಗಿ ಸರ್ಕಾರ ಈಡೇರಿಸಲಿದೆ. ಎಲ್ಲ ವಾರ್ಡ್‌ಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಕ್ರಮವಹಿಸಬೇಕು. ಕೈಗವಸು ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳೊಂದಿಗೆ ಕೆಲಸ ನಿರ್ವಹಿಸುವಂತೆ ನಿಗಾವಹಿಸಬೇಕು. ಸೌಲಭ್ಯಗಳನ್ನು ವಿತರಿಸಬೇಕು’ ಎಂದು ಸಚಿವ ಬೈರತಿ ಬಸವರಾಜ್‌ ಸೂಚಿಸಿದರು.

‘ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಕಾಮಗಾರಿಗಳನ್ನು ₹ 22.54 ಕೋಟಿ ವೆಚ್ಚದಲ್ಲಿ 158 ಮನೆಗಳನ್ನು ನೀಡಲು ಯೋಜನೆ ರೂಪಿಸಿ ಆರ್ಥಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಕಸ ಸಂಗ್ರಹ ಸ್ಥಳಗಳನ್ನು ಸುಂದರಗೊಳಿಸಲು ₹ 30 ಲಕ್ಷ ನೀಡಲಾಗಿದೆ. 22 ವಾರ್ಡ್‌ಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಅನುದಾನ ಸಿಕ್ಕಿದ್ದು, ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು. ಪೌರಕಾರ್ಮಿಕರು ಆಯ್ಕೆ ಮಾಡಿದ ಸುರಕ್ಷತಾ ಪರಿಕರಗಳನ್ನೇ ಪಾಲಿಕೆ ಒದಗಿಸಿದೆ’ ಎಂದು ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT