ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್‌ಗೆ ರೈತರಿಂದ ಘೇರಾವ್‌

Last Updated 19 ಸೆಪ್ಟೆಂಬರ್ 2020, 7:45 IST
ಅಕ್ಷರ ಗಾತ್ರ

ಮೈಸೂರು: ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರೋಧಿಸಿ ಮೈಸೂರಿನ ಗನ್‌ಹೌಸ್ ವೃತ್ತದ ಬಳಿ ರೈತರು, ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಶನಿವಾರ ಘೇರಾವ್ ಹಾಕಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲವನ್ನೂ ಖಾಸಗೀಕರಣ ಮಾಡಲು ಮುಂದಾಗಿವೆ. ಭೂಸೂಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳ್ಳವನಿಗೆ ಭೂಮಿ ನೀಡಲು ಹೊರಟಿವೆ. ಹೀಗಾದರೆ, ರೈತ ಎಲ್ಲಿಗೆ ಹೋಗಬೇಕು? ಹಲವಾರು ಬಾರಿ ಪ್ರತಿಭಟನೆ ಹಮ್ಮಿಕೊಂಡರೂ ಸರ್ಕಾರ ನಮ್ಮ ಸಮಸ್ಯೆ ಆಲಿಸಿಲ್ಲ’ ಎಂದು ಆರೋಪಿಸಿದ ರೈತರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಚಿವರ ಕಾರಿಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಮುತ್ತಿಗೆ ಹಾಕಿದರು. ರಸಗೊಬ್ಬರ, ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕಾರಿನಿಂದಿಳಿದ ಸಚಿವರು, ‘26ಕ್ಕೆ ಸಭೆ ಕರೆಯಲಾಗಿದ್ದು, ಅಲ್ಲಿ ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು’ ಎಂದರು.

‘ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದ್ದರೂ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಕಪ್ಪು ಬಾವುಟ ತೋರಿಸಿ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಿದ್ದರೆ ಈಡೇರಿಸಿಕೊಳ್ಳಲಿ; ಏನೂ ತೊಂದರೆ ಇಲ್ಲ’ ಎಂದು ಹೇಳಿದರು.

‘ರೈತರಿಗೆ ನೆರವಾಗುವ ಎಲ್ಲಾ ಕೆಲಸವನ್ನು ನಾವು ಮಾಡುತ್ತಿದ್ದೇವೆ. ರಸಗೊಬ್ಬರ ಸಮಸ್ಯೆ ಬಗ್ಗೆ ಯಾವುದೇ ದೂರು ಬಂದಿಲ್ಲ. ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡರು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ನಾನು ಕೂಡ ಮೈಸೂರಿಗೆ ಬಂದಾಗ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೇನೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT