ಶುಕ್ರವಾರ, ಜುಲೈ 30, 2021
21 °C
ಮೈಸೂರಿನ ಅಭಿವೃದ್ಧಿಗೆ ಪೂರಕ: ಸಚಿವ ಎಸ್‌.ಟಿ.ಸೋಮಶೇಖರ್

ಮುಡಾ: ₹ 422 ಕೋಟಿ ಬಳಕೆಗೆ ಸಚಿವ ಸಂಪುಟ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಹಣದಲ್ಲಿ ₹ 422 ಕೋಟಿಯನ್ನು ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮೈಸೂರಿನ ಅಭಿವೃದ್ಧಿಗೆ ಇದು ಪೂರಕವಾಗಲಿದೆ’ ಎಂದಿದ್ದಾರೆ.

‘ಮುಡಾದಿಂದ ಈಗಾಗಲೇ ನಿರ್ಮಿಸಿರುವ ಅನೇಕ ಬಡವಾಣೆಗಳಲ್ಲಿ ಬಾಕಿ ಉಳಿಸಲಾಗಿದ್ದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಈ ಹಣವನ್ನು ಬಳಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ’ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮುಡಾದಿಂದ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ ಪಾಲಿಕೆಗೆ ಹಸ್ತಾಂತರ ಮಾಡುವ ಪೂರ್ವದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಈ ಅನುದಾನದಡಿ ಏಕ ಕಾಲದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಪ್ರಾಧಿಕಾರ 25 ವರ್ಷಗಳಿಂದ ಸುಮಾರು 15 ಬಡಾವಣೆ ನಿರ್ಮಿಸಿ, ಒಟ್ಟು 46,746 ನಿವೇಶನ ಹಂಚಿಕೆ ಮಾಡಿದೆ. ಹಳೆಯ ಬಡಾವಣೆಗಳಲ್ಲೂ ಇಂದಿನ ಅಗತ್ಯಕ್ಕೆ ತಕ್ಕಂತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದಿದ್ದಾರೆ.

‘ಸರ್ಕಾರದ ಈ ನಿರ್ಧಾರದಿಂದ ಬಡಾವಣೆಗಳ ಅಭಿವೃದ್ಧಿಗೆ ಬಲವರ್ಧನೆ ದೊರೆತಂತಾಗಿದೆ. ಹಾಲಿ ಇರುವ ಹೊರವರ್ತುಲ ರಸ್ತೆಗೆ ಸಂಪರ್ಕ ರಸ್ತೆ ಕಲ್ಪಿಸುವುದು, ಮಹಾ ಯೋಜನೆಯ ರಸ್ತೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸುವುದು, ಕೆಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮ್ಯಾನ್‌ಹೋಲ್ ನಿರ್ಮಾಣ, ಯುಜಿಡಿ ಪೈಪ್‌ಲೈನ್ ಮತ್ತು ಟ್ರಂಕ್ ಲೈನ್‌ಗಳನ್ನು ಜೋಡಿಸಲಾಗುವುದು’ ಎಂದು ಸೋಮಶೇಖರ್‌ ತಿಳಿಸಿದ್ದಾರೆ.

‘ಮೈಸೂರಿನ ನೀರು ಸರಬರಾಜು ವ್ಯವಸ್ಥೆಯ ಮೇಲೂ ಗಮನ ಹರಿಸಬೇಕಿದೆ. ಹಳೆ ಉಂಡವಾಡಿ ಯೋಜನೆ ಮತ್ತು ಕಬಿನಿ ಉನ್ನತೀಕರಣ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸದರಿ ಯೋಜನೆಯಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಮೈಸೂರು ಅಭಿವೃದ್ಧಿಗಾಗಿ ಮುಡಾ ವತಿಯಿಂದ ಕಾರ್ಯ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ’ ಎಂದು ಸಚಿವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು