ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಾ ಆಯುಕ್ತರ ಕಾರು ಜಪ್ತಿ

ಭೂಸ್ವಾಧೀನದ ಹೆಚ್ಚುವರಿ ಪರಿಹಾರದ ಬಾಕಿ ನೀಡದ್ದಕ್ಕೆ ಕ್ರಮ
Last Updated 28 ಜನವರಿ 2021, 15:17 IST
ಅಕ್ಷರ ಗಾತ್ರ

ಮೈಸೂರು: ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಹೆಚ್ಚುವರಿ ಪರಿಹಾರದ ಬಾಕಿ ನೀಡದ ಕಾರಣ ಸಿಜೆಎಂ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಡಿ.ಬಿ.ನಟೇಶ್‌ ಅವರ ಕಾರು ಜಪ್ತಿ ಮಾಡಲಾಗಿದೆ.

ಈ ಸಂಬಂಧ ಅರ್ಜಿದಾರರ ಪರ ವಕೀಲ ಸುರೇಶ್, ನ್ಯಾಯಾಲಯದ ಅಮೀನರು ಮುಡಾ ಆವರಣದಲ್ಲಿ ಎರಡು ಕಾರುಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ಅಲ್ಲದೇ, ಕಾರಿನ ಮೇಲೆ ನೋಟಿಸ್‌ ಅಂಟಿಸಿದ್ದಾರೆ.

ತಾಲ್ಲೂಕಿನ ಯಾಂದಳ್ಳಿಯ ಗ್ರಾಮದ ಸರ್ವೆ ಸಂಖ್ಯೆ 109/1ರಲ್ಲಿ ಚಿನ್ನಸ್ವಾಮಿ ಎಂಬ ರೈತನಿಗೆ ಸೇರಿದ 1 ಎಕರೆ 26 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ ಮುಡಾ 1997 ಭೂಸ್ವಾಧೀನಪಡಿಸಿಕೊಂಡಿತ್ತು. ಹೆಚ್ಚುವರಿ ಪರಿಹಾರ ಕೋರಿ 2010ರಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

‘ನ್ಯಾಯಾಲಯದ ಆದೇಶದ ಪ್ರಕಾರ ಚಿನ್ನಸ್ವಾಮಿ ಅವರಿಗೆ ಪ್ರಾಧಿಕಾರವು ಹೆಚ್ಚುವರಿ ಪರಿಹಾರವಾಗಿ ಇನ್ನೂ ₹ 35.25 ಲಕ್ಷ ಬಾಕಿ ನೀಡಬೇಕಿದೆ. ಇದುವರೆಗೆ ಈ ಹಣ ಪಾವತಿಸಿಲ್ಲ. ಹೀಗಾಗಿ, ವಸೂಲಿಗಾಗಿ ಜಾರಿ ಪ್ರಕರಣದ ಅರ್ಜಿ ಹಾಕಲಾಗಿತ್ತು. ಚರಾಸ್ತಿಗೆ ಜಪ್ತಿಗೆ ಆದೇಶವಾಗಿದ್ದು, ವಾರದ ಹಿಂದೆಯೇ ನೋಟಿಸ್ ಕೂಡ ನೀಡಲಾಗಿದೆ. ಈಗ ಎರಡು ವಾಹನ ಜಪ್ತಿ ಮಾಡಿದ್ದೇವೆ. ಆದರೆ, ಆಯುಕ್ತರು ಕೀ ನೀಡುತ್ತಿಲ್ಲ’ ಎಂದು ವಕೀಲ ಸುರೇಶ್‌ ತಿಳಿಸಿದರು.

ಕಾರು ಜಪ್ತಿ ಮಾಡಿದ ಕಾರಣ ಮುಡಾ ಆಯುಕ್ತರು ಬೇರೆ ಕಾರಿನಲ್ಲಿ ತೆರಳಿದರು.

ಮರುಪರಿಶೀಲನಾ ಅರ್ಜಿ: ನಟೇಶ್‌
‘ನ್ಯಾಯಬದ್ಧವಾಗಿ ನೀಡಬೇಕಿದ್ದ ಹೆಚ್ಚುವರಿ ಪರಿಹಾರದ ಮೊತ್ತವನ್ನು ಪಾವತಿಸಲಾಗಿದೆ. ಹೀಗಾಗಿ, ಜಪ್ತಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲ ಯದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್‌ ಪ್ರತಿಕ್ರಿಯಿಸಿದರು.

‘ಭೂಸ್ವಾಧೀನಪಡಿಸಿಕೊಳ್ಳುವ ಪೂರ್ವದಲ್ಲಿ ಸರ್ವೆ ಸಂಖ್ಯೆ 109/1 ಪ್ರಕರಣದಲ್ಲಿ ₹ 8.96 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಬಳಿಕದ ವರ್ಷಗಳಲ್ಲಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಹೆಚ್ಚುವರಿ ಪರಿಹಾರ ನೀಡಬೇಕೆಂದು ಆದೇಶವಾಯಿತು. ಭೂಸ್ವಾಧೀನ ಪ್ರಕ್ರಿಯೆ ಆದ ದಿನದ ಲೆಕ್ಕಾಚಾರದ ಮೇಲೆ ₹ 89.79 ಲಕ್ಷವನ್ನು 2018ರಲ್ಲೇ ಪಾವತಿಸಿದ್ದೇವೆ. ಉಳಿದ ₹ 1.41 ಲಕ್ಷ ಬಾಕಿ ಇದೆ. ಆದರೆ, ಅವರು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಪರಿಹಾರ ನೀಡ ಬೇಕೆಂದು ಕೇಳುತ್ತಿದ್ದಾರೆ. ಇದು ಶಾಸನಬದ್ಧವಾಗಿಲ್ಲ. ಈ ರೀತಿ ಮಾಡಿದರೆ ಮುಡಾಗೆ ಹೊರೆಯಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT