ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಗೆ ಗಜಪಡೆ, ದಸರೆಗೆ ಮುನ್ನುಡಿ

ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಐದು ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ: ಸರಳ ಪೂಜೆ
Last Updated 3 ಅಕ್ಟೋಬರ್ 2020, 3:19 IST
ಅಕ್ಷರ ಗಾತ್ರ

ಮೈಸೂರು: ಗಜಪಡೆಯು ಅರಮನೆ ಆವರಣದೊಳಗೆ ಕಾಲಿರಿಸುವುದ ರೊಂದಿಗೆ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತ ಮುನ್ನುಡಿ ಲಭಿಸಿದೆ.

ಜಯಮಾರ್ತಾಂಡ ಮಹಾದ್ವಾರದ ಮೂಲಕ ಶುಕ್ರವಾರ ಮಧ್ಯಾಹ್ನ 12.45ರ ಸುಮಾರಿಗೆ ಅರಮನೆ ಆವರಣ ಪ್ರವೇಶಿಸಿದ ಐದು ಆನೆ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಸಂಪ್ರದಾಯದಂತೆ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು

ಅಂಬಾರಿ ಹೊರುವ ಕ್ಯಾಪ್ಟನ್‌ ಅಭಿಮನ್ಯು (54), ಕಾವೇರಿ (42), ಗೋಪಿ (38), ವಿಕ್ರಂ (47) ಹಾಗೂ ವಿಜಯಾ (61) ಆನೆಗಳಿಗೆ ಚಾಮುಂಡೇ ಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ಸಾರಥ್ಯದಲ್ಲಿ ಪೂಜೆ ನೆರವೇರಿ ಸಲಾಯಿತು. ಪೂರ್ಣಕುಂಭ ಸ್ವಾಗತ, ನಾದಸ್ವರದ ಹಿಮ್ಮೇಳದೊಂದಿಗೆ ಸ್ವಾಗತಿಸಲಾಯಿತು.

ನಾಡಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಸಚಿವರು ಫಲತಾಂಬೂಲ ನೀಡಿದರು. ಅಲ್ಲದೇ, ಮಾವುತರು ಹಾಗೂ ಕಾವಾಡಿಗರಿಗೆ ವಾಸ್ತವ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಲಾಯಿತು.ಬಳಿಕ ಸಚಿವರು ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿ ಹಾಗೂ ಅರಮನೆಯ ಗೊಂಬೆ ತೊಟ್ಟಿಲಿಗೆ ಪೂಜೆ ಸಲ್ಲಿಸಿದರು.

ಅರಣ್ಯ ಭವನದಲ್ಲೂ ಪೂಜೆ: ಗುರುವಾರವೇ ಅಶೋಕಪುರಂನ ಅರಣ್ಯ ಭವನಕ್ಕೆ ಬಂದು ತಂಗಿದ್ದ ಐದೂ ಆನೆಗಳಿಗೆ ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ನೆರವೇರಿಸಲಾಯಿತು. ಅರಣ್ಯಾಧಿ ಕಾರಿಗಳಾದ ಹೀರಲಾಲ್, ಎಂ.ಜೆ.ಅಲೆಕ್ಸಾಂಡರ್‌, ಪಶುವೈದ್ಯ ಡಾ.ನಾಗ ರಾಜು ಪಾಲ್ಗೊಂಡಿದ್ದರು. ಹಣೆಪಟ್ಟಿ, ಸಿರಿ, ಸಿಂಗೋಟಿ, ಜೂಲಾಗಳಿಂದ ಆನೆಗಳನ್ನು ಸಿಂಗರಿಸಿ ಅರಮನೆಗೆ ಕರೆದುಕೊಂಡು ಹೋಗಲಾಯಿತು.

ಶನಿವಾರದಿಂದ ತಾಲೀಮು: ಗಜಪಡೆಗೆ ಶನಿವಾರದಿಂದಲೇ ತಾಲೀಮು ಶುರುವಾಗಲಿದೆ. ಈ ಬಾರಿ ಜಂಬೂ ಸವಾರಿ ಅರಮನೆ ಆವರಣದಲ್ಲೇ ನಡೆ ಯಲಿರುವುದರಿಂದ ತಾಲೀಮು ಕೂಡ ಇಲ್ಲೇ ನಡೆಯಲಿದೆ.

ಮಾವುತರು ಹಾಗೂ ಕಾವಾಡಿಗರಿಗೆ ಅರಮನೆ ಆವರಣದಲ್ಲಿ 9 ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದೆ. ಅಲ್ಲದೇ, ಈ ಬಾರಿ ಮೂರು ಹೊತ್ತಿನ ಆಹಾರವನ್ನು ಅವರಿಗೆ ಅರಣ್ಯ ಇಲಾಖೆಯೇ ಸಿದ್ಧಪಡಿಸಿ ನೀಡಲಿದೆ.

ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಮೇಯರ್‌ ತಸ್ನೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್‌ ಕಮೀಷನರ್‌ ಡಾ.ಚಂದ್ರಗುಪ್ತ, ಡಿಸಿಪಿ ಡಾ.ಎ.ಎನ್‌.ಪ್ರಕಾಶ್‌ ಗೌಡ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಪಾಲ್ಗೊಂಡಿದ್ದರು.

ಅಂತರವಿಲ್ಲ; ಎಲ್ಲೆಲ್ಲೂ ಜನ
ಕೋವಿಡ್‌ ಪರಿಸ್ಥಿತಿಯಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯವೆಂದು ಸರ್ಕಾರ ಹೇಳುತ್ತಿದ್ದರೂ ಗಜಪಡೆ ಸ್ವಾಗತದ ವೇಳೆ ಅರಮನೆ ಆವರಣದಲ್ಲಿ ಜನಸಂದಣಿ ಹೆಚ್ಚು ಇತ್ತು. ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.

ಅಂತರ ವಿಚಾರ ಬಹಳ ದೂರ ಉಳಿದಿತ್ತು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸರು, ಇತರ ಸಿಬ್ಬಂದಿ ಜೊತೆಜೊತೆಯಲ್ಲೇ ನಿಂತು ಕಾರ್ಯಕ್ರಮ ನಿರ್ವಹಿಸಿದರು.

‘ಸೋಂಕು ಹೆಚ್ಚುತ್ತಿರುವ ಕಾರಣ ಈ ಬಾರಿ ಸರಳವಾಗಿ ದಸರೆ ಆಚರಿಸಲು ಸರ್ಕಾರ ನಿರ್ಧಾರ ಕೈಗೊಂಡು ಕೇವಲ ಐದು ಆನೆ ಕರೆತಂದಿದ್ದರೂ ಇಲ್ಲಿ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕಾಣಲಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಸರೆಯಲ್ಲಿ ಅಂತರ ಪಾಲನೆ, ಮಾಸ್ಕ್‌ ಕಡ್ಡಾಯ
ಕೋವಿಡ್‌–19 ಹಿನ್ನೆಲೆಯಲ್ಲಿ ದಸರಾ ಸಂದರ್ಭದಲ್ಲೂ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಲೇಬೇಕು. ಇಲ್ಲದಿದ್ದರೆ ದಂಡ ಹಾಕುವುದು ಅನಿವಾರ್ಯವಾಗಲಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ 250 ಮಂದಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಂದು ಸಾವಿರ ಹಾಗೂ ಜಂಬೂಸವಾರಿಗೆ ಎರಡು ಸಾವಿರ ಮಂದಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದು ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿಗೆ ಕೇಳಿಕೊಂಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವರು ಹೇಳಿದರು.

ಜನರಿಗೆ ನಿರಾಸೆ
ಪ್ರತಿಬಾರಿ ಅಶೋಕಪುರಂನಿಂದ ಅರಮನೆಗೆ ಆನೆಗಳನ್ನು ರಸ್ತೆಯಲ್ಲಿ ನಡೆಸಿಕೊಂಡು ಹೋಗಲಾಗುತಿತ್ತು. ಈ ಹಾದಿಯ ಬಡಾವಣೆಗಳು, ವೃತ್ತಗಳಲ್ಲಿ ನಿಂತ ಮಕ್ಕಳು, ಆನೆಗಳ ವೈಯ್ಯಾರದ ನಡಿಗೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದರು.

ಕೋವಿಡ್‌ ಪರಿಸ್ಥಿತಿ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಲಾರಿಯಲ್ಲಿ ಕರೆದೊಯ್ಯಲಾಯಿತು. ಮನೆಗಳಿಂದ ಹೊರಬರುವಷ್ಟರಲ್ಲಿ ಸರಕ್ಕನೇ ಹಾದು ಹೋದ ಕಾರಣ ಎಲ್ಲರೂ ನಿರಾಸೆಗೆ ಒಳಗಾದರು. ಇಷ್ಟಾಗಿಯೂ ಅಶೋಕಪುರಂ, ಕೃಷ್ಣಮೂರ್ತಿಪುರಂ ಬಡಾವಣೆ ಸೇರಿದಂತೆ ಕೆಲವೆಡೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿ ದೂರದಿಂದಲೇ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT