ಭಾನುವಾರ, ಡಿಸೆಂಬರ್ 6, 2020
19 °C
ದಸರಾ ಸಾಂಸ್ಕೃತಿಕ ವೇದಿಕೆ ತೆರವು; ಆನೆ ಶಿಬಿರಗಳಿಗೆ ಗಜಪಡೆಯ ಪಯಣ ಇಂದು

ಮೈಸೂರು ದಸರಾ| ಜನರಿದ್ದರೆ ಖುಷಿ; ಸಂಭ್ರಮವೂ ನೂರ್ಮಡಿ...

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಜನರೊಟ್ಟಿಗೆ ಜಮಾಯಿಸಿ ಅರಮನೆಯ ಅಂದವನ್ನು ಕಣ್ತುಂಬಿಕೊಂಡು ಅನುಭವಿಸುವುದೇ ಒಂದು ಆನಂದ. ಜನದಟ್ಟಣೆ ಇಲ್ಲದಿರುವುದರಿಂದ ಮನಸ್ಸಿಗೆ ಹಿತಾನುಭವವೇ ಸಿಗಲಿಲ್ಲ...’

ಜಂಬೂಸವಾರಿಯ ಮರುದಿನ (ಮಂಗಳವಾರ) ಮೈಸೂರು ಅರಮನೆ ವೀಕ್ಷಣೆಗೆ ಬಂದಿದ್ದ ಬಹುತೇಕ ಪ್ರವಾಸಿಗರ ಮನದಾಳದ ಮಾತಿದು.

‘ಪ್ರತಿ ವರ್ಷವೂ ವಿಜಯದಶಮಿಯ ಮರುದಿನ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುವೆ. ಈ ಹಿಂದಿನ ವರ್ಷಗಳಲ್ಲಿ ಕಿಕ್ಕಿರಿದ ಜನದಟ್ಟಣೆಯಿತ್ತು. ಈ ಬಾರಿ ಎಲ್ಲಿ ನೋಡಿದರೂ ಖಾಲಿ ಖಾಲಿ. ಜನರೇ ಹೆಚ್ಚಾಗಿ ಕಾಣಿಸಲಿಲ್ಲ’ ಎಂದು ಮಾಗಡಿಯ ಸಚಿನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಚಾಮುಂಡೇಶ್ವರಿಯ ದರ್ಶನಕ್ಕೆಂದು ಬೆಟ್ಟಕ್ಕೂ ಹೋಗಿದ್ದೆ. ಅಲ್ಲಿ ಒಮ್ಮೆಯೂ ನೇರವಾಗಿ ದರ್ಶನ ಸಿಕ್ಕಿರಲಿಲ್ಲ. ಆದರೆ ಮಂಗಳವಾರ ಮಾತ್ರ ತಾಯಿಯ ದರ್ಶನ ಸರಳವಾಗಿ ಆಯ್ತು. ಅಲ್ಲಷ್ಟೇ ಮನಸ್ಸಿಗೆ ಸಮಾಧಾನವಾಗಿದ್ದು. ಉಳಿದಂತೆ ಇಡೀ ಮೈಸೂರಿನ ಪ್ರವಾಸಿ ತಾಣಗಳನ್ನು ಸುತ್ತಿದರೂ ಹೆಚ್ಚಿನ ಜನದಟ್ಟಣೆ ಕಂಡುಬರಲಿಲ್ಲ’ ಎಂದು ಅವರು ಹೇಳಿದರು.

‘ಗೆಳೆಯನೊಟ್ಟಿಗೆ ಬೆಂಗಳೂರಿನಿಂದ ಬೈಕ್‌ನಲ್ಲಿ ಬಂದಿದ್ದೆ. ಅರಮನೆಯ ಆವರಣದಲ್ಲಿ ಜನರೇ ಇಲ್ಲವಾಗಿದ್ದಾರೆ. ಜನರಿದ್ದರೇ ಖುಷಿ. ಅರಮನೆಯ ವೈಭವಕ್ಕೂ ಶೋಭೆ. ಕೋವಿಡ್‌ನಿಂದ ಜನರಿಲ್ಲದಿರುವುದು ನಿರಾಸೆ ಮೂಡಿಸಿತು’ ಎಂದು ವಿದ್ಯುತ್ ಚಾಲಿತ ಮಗ್ಗ ನಡೆಸುವ ತೇಜಸ್‌ ತಿಳಿಸಿದರು.

‘ಜಂಬೂಸವಾರಿಯ ದಿನ ಅರಮನೆ ಪ್ರವೇಶಕ್ಕೆ ನಿಷೇಧವಿತ್ತು. ಆದ್ದರಿಂದ ಮರು ದಿನ ಗೆಳೆಯನೊಟ್ಟಿಗೆ ಬಂದು ಅರಮನೆಯನ್ನು ಕಣ್ತುಂಬಿಕೊಂಡೆ’ ಎಂದು ಹಾಸನದ ಶರತ್ ಹೇಳಿದರು.

ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಗಜಪಡೆಯ ಐದು ಆನೆಗಳು ಬುಧವಾರ ತಮ್ಮ ಶಿಬಿರಗಳಿಗೆ ಮರಳಲಿವೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯುವಿನ ಜೊತೆ ಛಾಯಾಚಿತ್ರ ತೆಗೆಸಿಕೊಳ್ಳಲು, ತೆಗೆದುಕೊಳ್ಳಲು ಅಸಂಖ್ಯಾತ ಜನರು ದುಂಬಾಲು ಬಿದ್ದ ಚಿತ್ರಣವೂ ಗೋಚರಿಸಿತು. ಹಲವು ಪ್ರವಾಸಿಗರು ದೂರದಿಂದಲೇ ಕಾಡಿನ ಆನೆಗಳನ್ನು ಕಣ್ತುಂಬಿಕೊಂಡರು.

ವೇದಿಕೆ ತೆರವು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅರಮನೆ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯನ್ನು ಮಂಗಳವಾರವೇ ತೆರವುಗೊಳಿಸಲಾಯಿತು.

ಎಂಟು ದಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಲರವ ಈ ವೇದಿಕೆಯಲ್ಲಿ ನಡೆದಿತ್ತು. ಇದೇ ಮೊದಲ ಬಾರಿಗೆ ನಡೆದ ವರ್ಚುವಲ್‌ (ಆನ್‌ಲೈನ್‌) ಸಮಾರಂಭವನ್ನು ನಾಡಿನ ಲಕ್ಷ, ಲಕ್ಷ ಜನರು ವೀಕ್ಷಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಸ್ವರಸಾಮ್ರಾಟ್‌, ಗಾನಗಾರುಡಿಗ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿ ನಮನ ಸಲ್ಲಿಸಿದ್ದು ಈ ಬಾರಿಯ ದಸರೆಯ ವಿಶೇಷಗಳಲ್ಲೊಂದು.

ಹೆಚ್ಚು ಜನರಿಂದ ವೀಕ್ಷಣೆ

ಏಳು ತಿಂಗಳ ಅವಧಿಯಲ್ಲಿ ಮೈಸೂರು ಅರಮನೆಯನ್ನು ಹೆಚ್ಚು ಜನರು ವೀಕ್ಷಿಸಿದ್ದು ಅ.27ರ ಮಂಗಳವಾರ.

ಜಂಬೂಸವಾರಿಯ ಮರು ದಿನವಾದ ಮಂಗಳವಾರ 2758 ಜನರು ಅರಮನೆಯನ್ನು ವೀಕ್ಷಿಸಿದ್ದಾರೆ. ಇದು ಈಚೆಗಿನ ದಿನಗಳಲ್ಲಿ ದಾಖಲೆಯ ಸಂಖ್ಯೆ ಎಂದು ಅರಮನೆ ಮಂಡಳಿಯ ಸಿಬ್ಬಂದಿ ವಿಜಯ್ ಮಾಹಿತಿ ನೀಡಿದರು.

ಹಿಂದಿನ ವರ್ಷದ ಜಂಬೂಸವಾರಿಯ ಮರುದಿನ 20,509 ಜನರು ಅರಮನೆಯನ್ನು ವೀಕ್ಷಿಸಿದ್ದರು ಎಂದು ಅವರು ಹೇಳಿದರು.

ವಿಜಯದಶಮಿಯಂದು 7,200 ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದರೆ, ಮಂಗಳವಾರ 2547 ಜನರು ಬಂದಿದ್ದರು. ಈಚೆಗಿನ ದಿನಗಳಲ್ಲಿ ಈ ಸಂಖ್ಯೆಯೇ ದೊಡ್ಡದು ಎಂದು ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ರಘು ತಿಳಿಸಿದರು.

ಅಭಿಮನ್ಯು ಜೊತೆ ಎರಡು ದಶಕದ ನಂಟು

‘ನಮ್ಮಪ್ಪ ಸಣ್ಣಪ್ಪ ಅಭಿಮನ್ಯುವಿನ ಮಾವುತರಾಗಿದ್ದರು. ಚಿಕ್ಕವನಿದ್ದಾಗಲೇ ನಾನು ಅಭಿಮನ್ಯುವಿನ ಕಾವಾಡಿಯಾಗಿದ್ದೆ. ನಮ್ಮಿಬ್ಬರದ್ದು ಎರಡು ದಶಕದ ನಂಟು’ ಎಂದು ಗಜಪಡೆಯ ದಂಡನಾಯಕ ಅಭಿಮನ್ಯು ಆನೆಯ ಮಾವುತ ವಸಂತ ಹೇಳಿದರು.

‘ಎರಡು ದಶಕದಿಂದಲೂ ಮೈಸೂರು ದಸರಾಗೆ ಬರುತ್ತಿರುವೆ. ಜಗತ್ತಿಗೆ ತೊಂದರೆಯಾಗಿದ್ದರಿಂದ ಈ ಬಾರಿ ಸರಳ ದಸರಾ ಆಚರಿಸಿದರು. ಇಂತಹ ಹೊತ್ತಲ್ಲೇ ಅಂಬಾರಿ ಹೊರುವ ಅವಕಾಶ ಅಭಿಮನ್ಯುವಿಗೆ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಜನಸಾಗರದ ನಡುವೆ ಯಶಸ್ಸಿಯಾಗಿ ಅಂಬಾರಿ ಹೊತ್ತು ಸಾಗಲಿದ್ದಾನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಚಿಕ್ಕಂದಿನಿಂದಲೂ ಅಭಿಮನ್ಯು ಜೊತೆ ಒಳ್ಳೆಯ ನಂಟಿದೆ. ನನ್ನ ಶಬ್ದ ಕೇಳಿದರೆ ಸಾಕು ಖುಷಿ ಪಡುತ್ತಾನೆ. ನಾ ಹೇಳಿದ ಎಲ್ಲ ಮಾತುಗಳನ್ನು ಚಾಚೂ ತಪ್ಪದೇ ಕೇಳುತ್ತಾನೆ’ ಎಂದು ವಸಂತ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು