ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

210 ಕಾಲೇಜುಗಳ ಸಂಯೋಜನೆಗೆ ಅಸ್ತು

ಮೈಸೂರು ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ತೀರ್ಮಾನ
Last Updated 18 ಜೂನ್ 2022, 10:33 IST
ಅಕ್ಷರ ಗಾತ್ರ

ಮೈಸೂರು: 2022–23ನೇ ಶೈಕ್ಷಣಿಕ ಸಾಲಿಗೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ 173 ಸಂಯೋಜಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು 37 ಶಿಕ್ಷಣ ಕಾಲೇಜುಗಳಿಗೆ ಸಂಯೋಜನೆ ಮುಂದುವರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.

ಇವುಗಳಲ್ಲಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ, ಹೋಟೆಲ್ ಮ್ಯಾನೇಜ್‌ಮೆಂಟ್, ಆಯಿಷ್, ಖಾಸಗಿ ವಾಕ್‌ ಮತ್ತು ಶ್ರವಣ ಸಂಸ್ಥೆ, ಗೃಹ ವಿಜ್ಞಾನ ಕಾಲೇಜುಗಳು ಹಾಗೂ ದೈಹಿಕ ಶಿಕ್ಷಣ ಕಾಲೇಜುಗಳು ಸೇರಿವೆ.

ಇಲ್ಲಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಜಿ. ಹೇಮಂತ್‌ಕುಮಾರ್‌, ‘ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗುವುದು. ಅಲ್ಲಿ ಅನುಮತಿ ಸಿಕ್ಕ ಬಳಿಕ ಕಾಲೇಜುಗಳಲ್ಲಿ ಪ್ರವೇಶಾತಿ ಅರಂಭಿಸಬಹುದು’ ಎಂದರು.

ಪರಿಶೀಲಿಸಲಾಗಿದೆ:

ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಲೋಕನಾಥ್‌, ಸ್ಥಳೀಯ ವಿಚಾರಣಾ ಸಮಿತಿ ಸಂಯೋಜನೆಗೆ ಶಿಫಾರಸು ಮಾಡಿರುವ ಕಾಲೇಜುಗಳ ವಿವರವನ್ನು ಮಂಡಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸಿ.ಎನ್. ಮಂಜೇಗೌಡ ಸೇರಿದಂತೆ ಶಿಕ್ಷಣ ಮಂಡಳಿಯ ಕೆಲವು ಸದಸ್ಯರು, ‘ಪರಿಶೀಲನಾ ಸಮಿತಿಯಲ್ಲಿ ಶಿಕ್ಷಣ ಮಂಡಳಿಯ ಸದಸ್ಯರನ್ನು ಸೇರಿಸಿಲ್ಲವೇಕೆ? ಸಮಿತಿಯು ಭೇಟಿ ಕೊಡುವುದನ್ನು ಸದಸ್ಯರಾದ ನಮ್ಮ ಗಮನಕ್ಕೆ ತರಲಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳು ಇರುವುದಿಲ್ಲ. ಅವುಗಳಿಗೆ ಸಂಯೋಜನೆ ಮುಂದುವರಿಸಿದರೆ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತರ ಕೊಡುವವರಾರು’ ಎಂದು ಕೇಳಿದರು. ‘ಸಮಿತಿಗೆ ನಮ್ಮನ್ನೂ ಸೇರಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಮಿತಿಯು ಮುಂಚಿತವಾಗಿ ಮಾಹಿತಿ ಕೊಟ್ಟು ಕಾಲೇಜುಗಳಿಗೆ ಭೇಟಿ ನೀಡಿದರೆ ಪ್ರಯೋಜನವಾದು. ದಿಢೀರ್ ಭೇಟಿ ಕೊಟ್ಟರೆ ವಾಸ್ತವ ಗೊತ್ತಾಗುತ್ತದೆ’ ಎಂದು ಸದಸ್ಯರು ಹೇಳಿದರು. ಇದಕ್ಕೆ ಸ್ಥಳೀಯ ಪರಿಶೀಲನಾ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾಲೇಜುಗಳಿಗೆ ಪೂರ್ವ ಮಾಹಿತಿ ಕೊಟ್ಟು ಸಮಿತಿಯು ಭೇಟಿ ಕೊಡುವುದಿಲ್ಲ. ಸಂಯೋಜನೆ ಮುಂದುವರಿಕೆಗೆ ಮೂಲ ಸೌಲಭ್ಯ ಇರುವುದು ಕಡ್ಡಾಯ. ಆದಾಗ್ಯೂ ಇಲ್ಲದಿದ್ದರೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗುತ್ತದೆ. ಅನುಪಾಲನಾ ವರದಿ ಪಡೆಯಲಾಗುತ್ತದೆ ಎಂದು ಸಮರ್ಥಿಸಿಕೊಂಡರು.

‘ವಿ.ವಿಯು ಶಿಫಾರಸು ಮಾಡಿದಾಗ್ಯೂ ಅನುಮೋದನೆ ನೀಡುವುದು ಸರ್ಕಾರಕ್ಕೆ ಬಿಟ್ಟಿರುತ್ತದೆ’ ಎಂದು ಕುಲಪತಿ ತಿಳಿಸಿದರು.

ತೆರಕಣಾಂಬಿಯಲ್ಲಿ ಕಾಲೇಜು ಆರಂಭ:

‘ಚಾಮರಾಜನಗರ ಜಿಲ್ಲೆ ತೆರಕಣಾಂಬಿಯಲ್ಲಿ ಕಾಲೇಜನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಎಂ.ಕಾಂ. ಹಾಗೂ ಬಿ.ಕಾಂ. ಕೋರ್ಸ್‌ ಆರಂಭಿಸಲಾಗುವುದು. ತಲಾ 15 ವಿದ್ಯಾರ್ಥಿಗಳು ಪ್ರವೇಶ ಪಡೆದಲ್ಲಿ ಬಿ.ಕಾಂ. ಮತ್ತು ಬಿಸಿಎ ಕೋರ್ಸ್‌ ಅನ್ನೂ ಪ್ರಾರಂಭಿಸಲಾಗುವುದು. ಜೊತೆಗೆ, ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ಕೋರ್ಸ್‌ಗಳನ್ನೂ ನೀಡಲಾಗುವುದು’ ಎಂದು ತಿಳಿಸಿದರು.

ಇದೇ ವೇಳೆ, ಮೈಸೂರಿನ ಎಂಐಟಿ ಹಾಗೂ ವಿಕ್ಟರಿ ಪ್ರಥಮ ದರ್ಜೆ ಕಾಲೇಜುಗಳು, ನೃಪತುಂಗ ಗಣಕ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಹಾಸನದ ವಿದ್ಯಾಸೌಧ ಅಕಾಡೆಮಿ ಅಫ್ ಮ್ಯಾನೇಜ್‌ಮೆಂಟ್ ಸೈನ್ಸ್‌ ಕಾಲೇಜುಗಳನ್ನು (ಬಿಕಾಂ, ಬಿಸಿಎ ಹಾಗೂ ಬಿಬಿಎ) ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಅನುಮೋದನೆ ನೀಡಲಾಯಿತು. ಪ್ರವೇಶಾತಿ ಕುಸಿದಿದ್ದರಿಂದ, ಇಲ್ಲಿನ ವಿಜಯನಗರ 1ನೇ ಹಂತದ ಕರ್ನಾಟಕ ರತ್ನ ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜಿಗೆ ಸಂಯೋಜನೆ ಮುಂದುವರಿಸಲು ಅರ್ಜಿ ಸಲ್ಲಿಸಿಲ್ಲ. ಹಾಸನದ ಹಾಸನಾಂಬ ಶಿಕ್ಷಣ ಕಾಲೇಜಿನ ಸಂಯೋಜನೆಯನ್ನು ಪ್ರಾಂಶುಪಾಲರ ಪತ್ರ ಆಧರಿಸಿ ಕೈಬಿಡಲಾಗಿದೆ ಎಂದು ಸಭೆಗೆ ಮಂಡಿಸಲಾಯಿತು.

ಬೆಳಗೊಳದ ಡಿ.ಪೌಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ. ಹಾಗೂ ಮೈಸೂರಿನ ಟೆರೀಷಿಯನ್‌ ಕಾಲೇಜಿನಲ್ಲಿ ಎಂ.ಎಸ್ಸಿ. ಸಸ್ಯವಿಜ್ಞಾನ ಕೋರ್ಸ್‌ ಆರಂಭಿಸಲು ಹೊಸ ಸಂಯೋಜನೆಗೆ ಶಿಫಾರಸಿಗೆ ನಿರ್ಧರಿಸಲಾಯಿತು.

ಮೈಸೂರಿನ ಎನ್‌ಐಇ, ಕ್ರೈಸ್ಟ್‌, ಕಾವೇರಿ, ಶೇಷಾದ್ರಿಪುರಂ, ಸೇಪಿಯೆಂಟ್, ಕ್ರಿಸ್ಟ್ ಪ್ರಥಮ ದರ್ಜೆ/ಪದವಿ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 60 ಪ್ರವೇಶಾತಿಗೆ ಸಮಿತಿ ಶಿಫಾರಸು ಮಾಡಿದೆ. ನಂಜನಗೂಡಿನ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜು, ಹೊನ್ನಲಗೆರೆಯ ಆರ್‌.ಕೆ. ಪ್ರಥಮ ದರ್ಜೆ ಕಾಲೇಜು, ಕೊಳ್ಳೇಗಾಲದ ನಿಸರ್ಗ ಮ್ಯಾನೇಜ್‌ಮೆಂಟ್‌ ಕಾಲೇಜು ಹಾಗೂ ಹಾಸನದ ಬೆಸ್ಟ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಬಿಸಿಎ ಕೋರ್ಸ್‌ ಆರಂಭಕ್ಕೆ ಅನುಮತಿ ನೀಡಲಾಯಿತು.

ಕುಲಸಚಿವರಾದ ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ್‌, ಹಣಕಾಸು ಅಧಿಕಾರಿ ಸಂಗೀತಾ ಗಜಾನನ ಭಟ್, ಶಾಸಕರಾದ ಎಲ್. ನಾಗೇಂದ್ರ, ನಿರಂಜನಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT