ಸೋಮವಾರ, ಸೆಪ್ಟೆಂಬರ್ 26, 2022
22 °C
ವಿದ್ಯುತ್ ಗುತ್ತಿಗೆದಾರಗೆ ಒಲಿದ ಮೇಯರ್ ಪಟ್ಟ

ಅಂದು ಮೇಯರ್‌ಗೆ ಸಹಾಯಕನಾಗಿದ್ದವರ ಮಗ ಬಿಜೆಪಿಯ ಶಿವಕುಮಾರ್ ಇದೀಗ ಮೈಸೂರು ಮೇಯರ್! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೂರನೇ ಬಾರಿಗೆ ಮಹಾನಗರಪಾಲಿಕೆ ಸದಸ್ಯರಾಗಿರುವ, 47ನೇ ವಾರ್ಡ್‌ (ಕುವೆಂಪುನಗರ) ಪ್ರತಿನಿಧಿಸುತ್ತಿರುವ ಶಿವಕುಮಾರ್ ಅವರಿಗೆ ನಗರದ ಪ್ರಥಮ ಪ್ರಜೆ ಮೇಯರ್‌ ಆಗುವ ಭಾಗ್ಯ ಒಲಿದಿದೆ.

ಅವರ ತಂದೆ ದಿವಂಗತ ಪುಟ್ಟಯ್ಯ, ಇದೇ ನಗರಪಾಲಿಕೆಯಲ್ಲಿ ಹಲವು ವರ್ಷಗಳವರೆಗೆ ಮೇಯರ್‌ಗಳಿಗೆ ದಫೇದಾರ್ (ಸಹಾಯಕ) ಆಗಿದ್ದರು. ಪುತ್ರನೂ ಮೇಯರ್‌ ಆಗಬೇಕು ಎಂಬ ಅವರ ಕನಸನ್ನು ಶಿವಕುಮಾರ್ ನನಸು ಮಾಡಿದ್ದಾರೆ.

ಸುಣ್ಣದಕೇರಿಯ 4ನೇ ಕ್ರಾಸ್ ನಿವಾಸಿಯಾದ ಶಿವಕುಮಾರ್, ಮರಿಮಲ್ಲಪ್ಪ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದರು. ನಂತರ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ವಿದ್ಯುತ್ ಗುತ್ತಿಗೆದಾರರಾಗಿ ವೃತ್ತಿ ಶುರು ಮಾಡಿದಾಗಲೇ, ರಾಜಕೀಯ ಪ್ರವೇಶಿಸಿ ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಬಿಜೆಪಿಯ ವಿವಿಧ ಹುದ್ದೆ ನಿರ್ವಹಿಸಿದ್ದಾರೆ.

2008ರಲ್ಲಿ ಸುಣ್ಣದಕೇರಿಯ ವಾರ್ಡ್‌ನಲ್ಲಿ ಗೆದ್ದಿದ್ದರು. 2013ರಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ್ದರು. ವಿರೋಧ ಪಕ್ಷದ ನಾಯಕ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಹೋದ ಚುನಾವಣೆಯಲ್ಲಿ, ಕುವೆಂಪುನಗರ ವಾರ್ಡ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದರು. ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕೋಶಾಧ್ಯಕ್ಷರೂ ಹೌದು.

ಪಕ್ಷ ಸಂಘಟನೆಗೆ ಶ್ರಮಿಸಿದ್ದು ಹಾಗೂ ಹಿರಿತನವನ್ನು ವರಿಷ್ಠರು ಪರಿಗಣಿಸಿದ್ದಾರೆ.

ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

‘ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇದಕ್ಕಾಗಿ ಕಾರ್ಯ ಯೋಜನೆ ರೂಪಿಸಲಾಗುವುದು’ ಎಂದು ನೂತನ ಮೇಯರ್‌ ಶಿವಕುಮಾರ್ ತಿಳಿಸಿದರು.

‘ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಾಯಕ ಸಮಾಜದ ನನ್ನನ್ನು ಆಯ್ಕೆ ಮಾಡಲಾಗಿದೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದರು.

‘ಜೆಡಿಎಸ್‌ನವರು ನಾಮಪತ್ರ ಸಲ್ಲಿಸುವಾಗ ತಪ್ಪು ಮಾಡಿದ್ದಾರೆ. ಇದಕ್ಕೆ ನಾವು ಹೊಣೆಯಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು