ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲಾ ಗಡಿ, ಕಚೇರಿ ಬಂದ್ ಕಷ್ಟಸಾಧ್ಯ

ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಪುಣ್ಯಸ್ಮರಣೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 6 ಜುಲೈ 2020, 14:48 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಹತ್ತು ದಿನಗಳಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲರಲ್ಲೂ ಆತಂಕ ಉಂಟಾಗಿದೆ’ ಎಂದುಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ನಗರ ರೈಲ್ವೆ ನಿಲ್ದಾಣ ಮುಂಭಾಗದ ವೃತ್ತದಲ್ಲಿರುವ ಡಾ.ಬಾಬು ಜಗಜೀವನ್‌ರಾಂ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡುವ ಮೂಲಕ, ಬಾಬೂಜಿ ಅವರ 34ನೇ ವರ್ಷದ ಪುಣ್ಯಸ್ಮರಣೆಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

‘ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಜಿಲ್ಲಾ ಗಡಿ ಬಂದ್ ಮಾಡಿ, ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಎನ್ನುತ್ತಿದ್ದಾರೆ. ಆದರೆ ಒಂದು ಪ್ರದೇಶ ಹಾಗೂ ಒಂದು ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಲು ಆಗುವುದಿಲ್ಲ. ಒಂದು ನಿಮಿಷಕ್ಕೆ ನೂರಕ್ಕೂ ಹೆಚ್ಚು ವಾಹನ ಬರುತ್ತವೆ. ಎಲ್ಲಾ ವಾಹನಗಳನ್ನು ತಡೆದು ತಪಾಸಣೆ ಮಾಡಿದರೆ, ವಾಹನ ದಟ್ಟಣೆ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ನಮ್ಮ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಸರ್ಕಾರಿ ಅಧಿಕಾರಿಗಳಲ್ಲೂ ಸೋಂಕು ಕಂಡು ಬರುತ್ತಿದ್ದು, ಈ ಹಿನ್ನೆಲೆ ಕಚೇರಿಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಇದೀಗ ಕಂದಾಯ ವರ್ಷ ಆರಂಭವಾಗಿದೆ. ಕೃಷಿ ಚಟುವಟಿಕೆ ಚುರುಕಾಗಿದ್ದು, ಎಲ್ಲಾ ಕಡೆ ರೈತರು ಆರ್‌ಟಿಸಿ, ಬೆಳೆ ನಮೂದಿಸಲು ಹಾಗೂ ಸಾಲ ಪಡೆಯಲು ಬರುತ್ತಾರೆ. ಆದರೆ ಸುಖಾಸುಮ್ಮನೆ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಬೇಡ. ಇದರಿಂದ ಪ್ರತಿಯೊಬ್ಬರಿಗೂ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಅತಿ ತುರ್ತು ಅಲ್ಲದ ಕೆಲಸಗಳಿಗೆ ಹೆಚ್ಚು ಓಡಾಡುವುದನ್ನು ನಿಲ್ಲಿಸಿ’ ಎಂದು ಮನವಿ ಮಾಡಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ ‘ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಪುಣ್ಯಸ್ಮರಣೆಯನ್ನು ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮೇಯರ್ ತಸ್ನೀಂ, ಉಪ ಮೇಯರ್ ಸಿ.ಶ್ರೀಧರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ನಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ವಿಭಾಗಾಧಿಕಾರಿ ಡಾ.ವೆಂಕಟರಾಜು, ತಹಶೀಲ್ದಾರ್ ರಕ್ಷಿತ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಡಿಡಿಪಿಐ ಡಾ.ಪಾಂಡುರಂಗ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮೇಘಾ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಂ.ಪ್ರಕಾಶ್, ಮಾಜಿ ಮೇಯರ್ ಪುರುಪೋತ್ತಮ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT