ಸೋಮವಾರ, ಅಕ್ಟೋಬರ್ 21, 2019
21 °C
ರೈತ ದಸರಾ ಕಾರ್ಯಕ್ರಮ

ಮಹಿಷ ಆರಾಧನೆಯನ್ನೂ ಗೌರವಿಸೋಣ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Published:
Updated:
Prajavani

ಮೈಸೂರು: ‘ಭಾರತದಲ್ಲಿ ಕೋಟ್ಯಂತರ ಜನ ತಾಯಿ ಚಾಮುಂಡಿಯನ್ನು ಬೆಂಬಲಿಸುತ್ತಾರೆ, ಆದರೆ ಅಲ್ಲೊ ಇಲ್ಲೊ ಮಹಿಷನನ್ನು ಸರಿ ಎಂಬುವವರೂ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಗೌರವಿಸಬೇಕು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿನ ಜೆ.ಕೆ. ಮೈದಾನದ ವೈದ್ಯಕೀಯ ಮಹಾವಿದ್ಯಾಲಯದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಚಾಮುಂಡೇಶ್ವರಿ ಸಮಾಜದ ಒಳಿತಿಗಾಗಿ ಅಸುರನನ್ನು ಸಂಹಾರ ಮಾಡಿದಳು. ಇಂಥ ದೇವಿಯನ್ನು ಎಲ್ಲರೂ ಆರಾಧಿಸುವ ಸಂದರ್ಭ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಅನೇಕ ವರ್ಷಗಳಿಂದ ತೀವ್ರ ಬರಗಾಲವಿತ್ತು, ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚು ಮಳೆಯಾಗಿ ಜಲಾಶಯಗಳೆಲ್ಲ ತುಂಬಿದವು. ರೈತರ ಮುಖದಲ್ಲಿ ಸಂತೋಷ ಕಂಡಿದ್ದೇವೆ. ಪ್ರವಾಹ ಬಂದು ಅನೇಕ ಸಮಸ್ಯೆಯಾಗಿದೆ. ಆದರೆ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ’ ಎಂದು ಸಮರ್ಥನೆ ನೀಡಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದಂತೆ ಒಬೊಬ್ಬ ಸಚಿವರೂ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು  ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ’ ಎಂದು ಹೇಳಿದರು.

‘ಸುಮಾರು 3 ಲಕ್ಷ ಜನ ಒಳನಾಡು ಮೀನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ, ಅವರ ಬದುಕಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನು ಜಾರಿಗೆ ತರಲು ಕಾರ್ಯಕ್ರಮ ರೂಪಿಸುತ್ತೇವೆ’ ಎಂದರು.

ಕೃಷಿಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ರೈತರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಜಿ.ಪಂ. ಅಧ್ಯಕ್ಷೆ ಪರಿಮಳಾ ಶ್ಯಾಮ್‌ ಸೇರಿದಂತೆ ಇತರರು ಇದ್ದರು.

Post Comments (+)