ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಡಕಾಯಿತರ ಬಂಧನ– 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು

Last Updated 27 ನವೆಂಬರ್ 2021, 14:20 IST
ಅಕ್ಷರ ಗಾತ್ರ

ಮೈಸೂರು: ಪಿಗ್ಮಿ ಸಂಗ್ರಹಕಾರರನ್ನೇ ಗುರಿಯಾಗಿಸಿಕೊಂಡು ಡಕಾಯಿತಿ ಮಾಡುತ್ತಿದ್ದ ‌ಐವರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ‌ಶನಿವಾರ ಬಂಧಿಸಿದ್ದಾರೆ.

₹ 45,300 ನಗದು ಹಾಗೂ ₹ 2 ಲಕ್ಷ ಮೌಲ್ಯದ ವಾಹನ ಹಾಗೂ ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಡಕಾಯಿತಿ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಉದಯಗಿರಿ ಠಾಣೆ ಪೊಲೀಸರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದರೋಡೆ ಮಾಡಿದ ವಿವರಗಳು:
ನ. 22ರಂದು ಸಂಜೆ 7.30 ರಲ್ಲಿ ಎನ್.ಆರ್.ಮೊಹಲ್ಲಾ ನಿವಾಸಿ ರವಿ ಎಂಬುವವರನ್ನು ಅಂಬಾಭವಾನಿ ದೇಗುಲದ ಮುಂಭಾಗ ಅಡ್ಡಗಟ್ಟಿ ₹ 10 ಸಾವಿರ ನಗದು, ನ.24ರಂದು ಮಧ್ಯಾಹ್ನ2.30 ರ ಸಮಯದಲ್ಲಿ ರೈಲ್ವೆ ಬಡಾವಣೆ ನಿವಾಸಿ ಸ್ವಾಮಿ ಅವರಿಂದ ಸಾತಗಳ್ಳಿಯಲ್ಲಿ ₹12 ಸಾವಿರ ನಗದು, ಅದೇ ದಿನ ರಾತ್ರಿ 8.30 ರಲ್ಲಿ ದಟ್ಟಗಳ್ಳಿ ನಿವಾಸಿ ರಾಜೇಶ್ ಅವರಿಂದ ಹಲೀಂನಗರದಲ್ಲಿ ₹ 20 ಸಾವಿರ ನಗದು ಹಾಗೂ ಮೊಬೈಲ್ ನ್ನು, ನ.23 ರಂದು ಬೆಳಿಗ್ಗೆ8.30 ರ ಸಮಯದಲ್ಲಿ ಗಾಯತ್ರಿಪುರಂ ನಿವಾಸಿ ಅರ್ಚುಸ್ವಾಮಿ ಅವರಿಂದ ಉದಯಗಿರಿಯ ಕೂಬಾ ಮಸೀದಿ ರಸ್ತೆಯಲ್ಲಿ ₹ 10 ಸಾವಿರ ನಗದನ್ನು ದರೋಡೆ ಮಾಡಿದ್ದರು.

ನ.22 ರಿಂದ 24 ರವರೆಗೆ ಪಿಗ್ಮಿ ಸಂಗ್ರಹಕಾರರನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ನಡೆದ ಡಕಾಯಿತಿ ಪ್ರಕರಣಗಳ ಪತ್ತೆಗೆ ನಗರ ಪೊಲೀಸ್ ಕಮಿಷನರ್ ಡಾಚಂದ್ರಗುಪ್ತ ವಿಶೇಷ ತಂಡ ರಚಿಸಿದ್ದರು. ದೇವರಾಜ ಉಪವಿಭಾಗದ ಎಸಿಪಿ ಎಂ‌.ಎನ್‌.ಶಶಿಧರ್ ಅವರ ಮಾರ್ಗದರ್ಶನದಲ್ಲಿ ಉದಯಗಿರಿ ಠಾಣೆಯ ಇನ್ ಸ್ಪೆಕ್ಟರ್ ಪಿ.ಕೆ.ರಾಜು ನೇತೃತ್ವದ ಪೊಲೀಸರ ತಂಡ ದರೋಡೆಕೋರರ ಹೆಡೆಮುರಿಕಟ್ಟಿದೆ.

ಸಿಬ್ಬಂದಿ ಸುನಿಲ್, ನಾಗರಾಜ ನಾಯಕ, ಶಂಕರ, ಸಿದ್ದಿಕ್‌ಮಹಮ್ಮದ್, ಸೋಮಶೇಖರ್, ಮೋಹನಕುಮಾರ, ಶಿವರಾಜು, ಸಮೀರ್ ಪಟೇಲ್, ಕುಮಾರ್ ಕಾರ್ಯಾಚರಣೆ ತಂಡದಲ್ಲಿ ಇದ್ದರು.

ಆರೋಪಿಗಳ ಪೈಕಿ ಒಬ್ಬಾತ ಸ್ಥಳೀಯ ನಿವಾಸಿಯಾಗಿದ್ದು ಫೈನಾನ್ಸ್ ಹಾಗೂ ಖಾಸಗಿ ಬ್ಯಾಂಕ್ ಗಳ ಬಳಿ ಪಿಗ್ಮಿ ಸಂಗ್ರಹಕಾರರು ಬರುವುದನ್ನೇ ಹೊಂಚು ಹಾಕಿ ಅವರು ಹಣ ಸಂಗ್ರಹಿಸಿ ನಿತ್ಯ ಬರುವ ಸಮಯವನ್ನು ‌ತಿಳಿದುಕೊಂಡು ನಿರ್ಜನ ಪ್ರದೇಶಗಳಲ್ಲಿ ಇತರ ಆರೋಪಿಗಳ ಜತೆಗೆ ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟುತ್ತಿದ್ದ. ದೊಣ್ಣೆ ಚಾಕು ಹಾಗೂ ಇತರ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT