ಮೈಸೂರು: ‘ಪಕ್ಷ ಸಂಘಟನೆಯ ದೃಷ್ಟಿಯಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ನೀಡುವಂತೆ ಹೇಳಿದರು. ತಕ್ಷಣವೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಮಂಗಳವಾರ ಇಲ್ಲಿ ತಿಳಿಸಿದರು.
ಚಾಮುಂಡೇಶ್ವರಿಯ ದರ್ಶನಕ್ಕಾಗಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂಸದರು ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ, ‘ರಾಜೀನಾಮೆ ನೀಡಿದ್ದು ಸಂಘಟನೆಗೆ ಸಂಬಂಧಿಸಿದ ವಿಷಯ. ಕೆಲವು ಪ್ರಮುಖ ರಾಜ್ಯಗಳ ಚುನಾವಣೆಗಾಗಿ ಪಕ್ಷ ಸಜ್ಜುಗೊಳಿಸಲಿಕ್ಕಾಗಿಯೇ ರಾಷ್ಟ್ರೀಯ ಅಧ್ಯಕ್ಷರು ಈ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.
‘ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೆದಿದೆ. ಹಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಜಾಗತಿಕವಾಗಿ ಬೆಳೆದಿದ್ದಾರೆ’ ಎಂದರು.
‘ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಸಿಕ್ಕಷ್ಟು ಅವಕಾಶ ರಾಜ್ಯದಲ್ಲಿ ಯಾರಿಗೂ ಸಿಕ್ಕಿಲ್ಲ. ನಾನೊಬ್ಬ ಸುಸಂಸ್ಕೃತ ರಾಜಕಾರಣಿ. ಅಧಿಕಾರ ಕೊಟ್ಟಾಗ ಎತ್ತರಕ್ಕೆ ಏರುವುದು, ಕೊಡದಿದ್ದಾಗ ಕುಸಿಯುವುದು ಒಳ್ಳೆಯದಲ್ಲ. ಎರಡನ್ನೂ ಸಮಾನ ಮನಸ್ಸಿನಲ್ಲಿ ಸ್ವೀಕರಿಸಿ ಮುಂದೆ ನಡೆಯಬೇಕು’ ಎಂದು ಸದಾನಂದಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜಕೀಯದಲ್ಲಿ ಟೀಕೆ–ಟಿಪ್ಪಣಿ ಸಹಜ. ರಾಜಕೀಯ ದೊಡ್ಡ ಸಮುದ್ರ ಇದ್ದಂತೆ. ಸಮುದ್ರ ಸ್ನಾನಕ್ಕೆ ಇಳಿದವರು ಅಲೆಗಳಿಗೆ ಕಾಯಬಾರದು. ಎಲ್ಲದಕ್ಕೂ ನಮ್ಮ ಕೆಲಸ, ಬದ್ಧತೆಯ ಮೂಲಕವೇ ಉತ್ತರ ಕೊಡಬೇಕು’ ಎಂದು ಸಂಸದರು ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.