ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಎನ್‌ಇಪಿ ಸಹಕಾರಿ: ತಮಿಳುನಾಡು ರಾಜ್ಯಪಾಲ

Last Updated 27 ಜುಲೈ 2022, 11:14 IST
ಅಕ್ಷರ ಗಾತ್ರ

ಮೈಸೂರು: ‘ಬ್ರಿಟಿಷರು ರೂಪಿಸಿದ್ದ ಶಿಕ್ಷಣ ವ್ಯವಸ್ಥೆಯನ್ನು ಹೋಗಲಾಡಿಸಿ ಸುಧಾರಣೆ ತರುವ ನಿಟ್ಟಿನಲ್ಲಿ ಎನ್‌ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಸಹಕಾರಿಯಾಗಿದೆ’ ಎಂದು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ‌ಪ್ರತಿಪಾದಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಎನ್ಇಪಿಯು ಬದಲಾವಣೆ ತರುವುದಿಲ್ಲ. ಬದಲಿಗೆ, ಸುಧಾರಣೆ ತರುತ್ತದೆ. ಈಗ ಅಳವಡಿಸಲಾಗಿರುವ ಪಠ್ಯಕ್ರಮ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ದಿಸುತ್ತದೆ. ನಮ್ಮದಾದ ಮೂಲ ವ್ಯವಸ್ಥೆಯನ್ನು ಸುಸ್ಥಿರಗೊಳಿಸುತ್ತದೆ. ಕೌಶಲ, ಜ್ಞಾನ ಮತ್ತು ವಿಜ್ಞಾನವನ್ನು ಬೆಸೆಯುತ್ತದೆ. ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುತ್ತದೆ’ ಎಂದು ತಿಳಿಸಿದರು.

‘ದೇಶದಲ್ಲಿ ಲಕ್ಷಾಂತರ ಪದವೀಧರರನ್ನು ವಿಶ್ವವಿದ್ಯಾಲಯಗಳು ರೂಪಿಸಿವೆ. ಅಷ್ಟೇ ಪ್ರಮಾಣದಲ್ಲಿ ನಿರುದ್ಯೋಗಿಗಳೂ ಇದ್ದಾರೆ. ಪದವಿಗಳನ್ನು ಮಾತ್ರವೇ ನೀಡುವ ವ್ಯವಸ್ಥೆಯು ನಮಗೆ ಬ್ರಿಟಿಷರು ನೀಡಿದ ಕೊಡುಗೆಯೇ. ಪದವೀಧರರಲ್ಲಿ‌ ಬಹಳಷ್ಟು ‌ಮಂದಿ ಉದ್ಯೋಗ ‌ಕೇಳುವವರೇ ಆಗಿದ್ದಾರೆಯೇ ಹೊರತು ಕೊಡುವವರಾಗಿಲ್ಲ. ಇಂತಹ ಶಿಕ್ಷಣ ವ್ಯವಸ್ಥೆಯ ‌ಬಗ್ಗೆ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

ಗೌರವಿಸುವ ಸಂಸ್ಕೃತಿ ನಮ್ಮದು:‘ಪಾಶ್ಚಿಮಾತ್ಯ ಮೂಲದ ಜ್ಞಾನವು ‘ಮಾನವನೇ ಸರ್ವೋಚ್ಛ ’ ಎಂದು ಹೇಳುತ್ತದೆ. ಆದರೆ, ನಮ್ಮ ಸಂಸ್ಕೃತಿಯು ಮಾನವೀಯತೆಯೇ ಶ್ರೇಷ್ಠ ಎಂಬುದನ್ನು ತಿಳಿಸುವಂಥದ್ದು. ಸಕಲ ಜೀವರಾಶಿ ಹಾಗೂ ಪ್ರಕೃತಿಯನ್ನು ಗೌರವಿಸಬೇಕು ಎಂಬುದನ್ನು ಕಲಿಸುತ್ತದೆ. ಇದೆಲ್ಲವನ್ನೂ ಎನ್‌ಇಪಿ ಒಳಗೊಂಡಿದೆ’ ಎಂದು ಹೇಳಿದರು.

‘ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಹಂತ-ಹಂತವಾಗಿ ನಮ್ಮ ಪ್ರದೇಶಗಳನ್ನು ವಶಪಡಿಸಿಕೊಂಡರು. ನಮ್ಮನ್ನು ಆಳಿದರು. ಭಾರತವನ್ನು ಹಾಳು ಮಾಡಬೇಕಾದರೆ ಶಿಕ್ಷಣ ವ್ಯವಸ್ಥೆಯನ್ನು ಕೊಲ್ಲಬೇಕೆಂದು ಬಯಸಿ ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರ ರೂಪಿಸಿದರು. ತಮ್ಮ ಆಡಳಿತದ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವವರನ್ನು ರೂಪಿಸುವ ಶಿಕ್ಷಣವನ್ನಷ್ಟೆ ನೀಡಿದರು. ಗುಡಿ ಕೈಗಾರಿಕೆಗಳನ್ನು ಮುಚ್ಚಿದರು’ ಎಂದು ವಿವರಿಸಿದರು.

‘ದೇಶದ ಆಚಾರ, ವಿಚಾರ, ಸಂಸ್ಕೃತಿ, ಕಲೆ, ಸಂಗೀತ, ರಾಜಕೀಯ, ಚರಿತ್ರೆ ಹೀಗೆ... ಎಲ್ಲವನ್ನೂ ಬ್ರಿಟಿಷ್‌ (ಯೂರೋಪ್‌)ಮಯ ಮಾಡಿದರು. ಪಶ್ಚಿಮದಿಂದ ಬಂದಿದ್ದೆಲ್ಲವೂ ಶ್ರೇಷ್ಠ ಎಂದು ನಂಬಿಕೆ ಬರುವಂತೆ ಮಾಡಿದರು. ಆ ಪ್ರಭಾವದ ಶಿಕ್ಷಣದಿಂದ ಹೊರ ಬಂದು, ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯತ್ತ ಹೋಗಬೇಕು. ದೇಶವನ್ನು ಮತ್ತಷ್ಟು ಸ್ವಾವಲಂಬಿಯನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ, ಇತಿಹಾಸವನ್ನು ಸ್ಮರಿಸಬೇಕು. ಮುಮ್ಮಡಿ ಕೃಷ್ಣರಾಜ ಒಡೆಯರ್ ನೆಟ್ಟ ಬೀಜವದು. ಆರ್ಥಿಕವಾಗಿ‌ ಹಿಂದುಳಿದ ವರ್ಗದವರಿಗೆ ಶಿಕ್ಷಣ ಕಲ್ಪಿಸುವ ಕಾರ್ಯಕ್ಕೆ ಅವರು ಚಾಲನೆ ನೀಡಿದರು. ಮೈಸೂರು ಭಾಗದವರಿಗೆ ಉನ್ನತ ಶಿಕ್ಷಣ ನೀಡುವುದಕ್ಕಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿಶ್ವವಿದ್ಯಾಲಯ ಆರಂಭಿಸಿದರು’ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಲಲಿತಾ‌ಕಲಾ‌ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರೊ.ಸಿ. ನಾಗಣ್ಣ ನಿರೂಪಿಸಿದರು.

‘ರಾಷ್ಟ್ರೀಯ ವಿಶ್ವವಿದ್ಯಾಲಯವಾಗಲಿ’

ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಮಾತನಾಡಿ, ‘ವಿ.ವಿಯು 106 ವರ್ಷಗಳನ್ನು ಕಂಡಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲವಿದು. ಸಣ್ಣ ತೊರೆಯಿಂದ ಆರಂಭವಾಗಿ ವಿಶಾಲವಾದ ನದಿಯಾಗಿದೆ‌. ರಾಷ್ಟ್ರೀಯ ‌ವಿಶ್ವವಿದ್ಯಾಲಯದ ಸ್ಥಾನಮಾನ‌ ಹೊಂದಲು ಬೇಕಾದ ಎಲ್ಲ ರೀತಿಯ ಅರ್ಹತೆಗಳನ್ನೂ ಹೊಂದಿದೆ. ಅದು ಬೇಗ ಸಾಕಾರವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

***

ಹೊಸ ನೀತಿ ಅನುಷ್ಠಾನವಾದಾಗ ಟೀಕೆ–ಟಿಪ್ಪಣಿಗಳು ಸಹಜ. ಶಿಕ್ಷಣ ಸಂಸ್ಥೆಗಳವರು, ಸಂಪನ್ಮೂಲ ವ್ಯಕ್ತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು

–ಆರ್‌.ಎನ್.ರವಿ, ರಾಜ್ಯಪಾಲ, ತಮಿಳುನಾಡು

***

ಎನ್‌ಇಪಿ ಅನುಷ್ಠಾನ ಸೇರಿದಂತೆ ಎಲ್ಲದರಲ್ಲೂ ಮೊದಲು ಎನ್ನುವ ‌ಹೆಗ್ಗಳಿಕೆಯನ್ನು ಮೈಸೂರು ವಿಶ್ವವಿದ್ಯಾಲಯವು ಮುಂದುವರಿಸಿಕೊಂಡು ‌ಹೋಗಬೇಕು

–ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜವಂಶಸ್ಥ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT