ಶುಕ್ರವಾರ, ಮಾರ್ಚ್ 5, 2021
17 °C
ಅಖಿಲ ಭಾರತೀಯ ಶಿಕ್ಷಣ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿ ಶಿವಾನಂದ ಸಿಂದನಕೇರ ಅಭಿಮತ

ಎನ್‌ಇಪಿ ಅನುಷ್ಠಾನ; ಮತ್ತೊಂದು ಮೈಲುಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಗೊಳಿಸಿದರೆ, ಮತ್ತೊಂದು ಮೈಲುಗಲ್ಲು ನಿರ್ಮಿಸಿದಂತಾಗುತ್ತದೆ’ ಎಂದು ಅಖಿಲ ಭಾರತೀಯ ಶಿಕ್ಷಣ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿ ಶಿವಾನಂದ ಸಿಂದನಕೇರ ತಿಳಿಸಿದರು.

‘ಜಮ್ಮು ಮತ್ತು ಕಾಶ್ಮೀರಕ್ಕಿದ್ದ 370ನೇ ವಿಧಿಯ ರದ್ಧತಿಯನ್ನು ದೇಶದ ಜನಸ್ತೋಮ ಯಾವ ರೀತಿ ಅಭೂತಪೂರ್ವವಾಗಿ ಸ್ವಾಗತಿಸಿತೋ; ಅದೇ ಮಾದರಿಯಲ್ಲಿ ಶಿಕ್ಷಣ ನೀತಿಯನ್ನೂ ದೇಶ ವಾಸಿಗಳು ಸ್ವಾಗತಿಸಲಿದ್ದಾರೆ’ ಎಂದು ಗುರುವಾರ ಸಂಜೆ ಇಲ್ಲಿನ ಕುವೆಂಪು ನಗರದ ಗಣೇಶ ಸಭಾಂಗಣದಲ್ಲಿ ನಡೆದ ಸಾಧಕರೊಂದಿಗೆ ಸಂವಾದದಲ್ಲಿ ಹೇಳಿದರು.

‘ಬ್ರಿಟಿಷರಿಂದ ನಮ್ಮ ಶಿಕ್ಷಣ ಪದ್ಧತಿ ಸಂಪೂರ್ಣ ನಾಶವಾಗಿದೆ. ಸ್ವಾತಂತ್ರ್ಯ ನಂತರವೂ ನಮ್ಮ ದೇಶ, ಶಿಕ್ಷಣ ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ. ಭಾರತ ಕೇಂದ್ರಿತ, ಎಲ್ಲರನ್ನೂ ಒಳಗೊಂಡ, ಜ್ಞಾನಭರಿತ ಸಮಾಜವನ್ನು ನಿರ್ಮಿಸುವ ಆಶಯ ಹೊಂದಿರುವ ಎನ್‌ಇಪಿ ಅನುಷ್ಠಾನಗೊಂಡರೆ ಮಾತ್ರ, ದೇಶದ ಭವಿಷ್ಯ ಉಜ್ವಲವಾಗಲಿದೆ’ ಎಂದರು.

‘ಎನ್‌ಇಪಿಯಲ್ಲಿ ನಾಲ್ಕು ಭಾಗವಿದೆ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂಟು, ಉನ್ನತ ಶಿಕ್ಷಣ–10, ಪ್ರಮುಖವಾಗಿ ಗಮನಿಸಬೇಕಾದ ಸಂಗತಿಗಳ ಕುರಿತಂತೆ ನಾಲ್ಕು, ರಾಷ್ಟ್ರೀಯ ಶಿಕ್ಷಣ ಆಯೋಗದ ಸ್ವರೂಪ, ಕಾರ್ಯ ನಿರ್ವಹಣೆ ಕುರಿತಂತೆ ಒಂದು ಅಧ್ಯಾಯವಿದ್ದು, ಒಟ್ಟು 23 ಅಧ್ಯಾಯಗಳಿವೆ. ಇವುಗಳಲ್ಲಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಮುಂದಿನ ಮೂರು ದಶಕ ದೇಶ ಯಾವ ಹಾದಿಯಲ್ಲಿ ಸಾಗಬೇಕು ಎಂಬುದನ್ನು ಬಿಂಬಿಸಲಾಗಿದೆ’ ಎಂದು ಹೇಳಿದರು.

‘ಚುನಾವಣಾ ಆಯೋಗದ ಮಾದರಿಯಲ್ಲೇ ರಾಷ್ಟ್ರೀಯ ಶಿಕ್ಷಣ ಆಯೋಗವೂ ಕಾರ್ಯನಿರ್ವಹಿಸಬೇಕು. ಇದರಲ್ಲಿ ಶೇ 50ರಷ್ಟು ಶಿಕ್ಷಣ ತಜ್ಞರೇ ಇರಬೇಕು. ಪ್ರಮುಖ ನಿರ್ಣಯಗಳನ್ನು ಇವರೇ ತೆಗೆದುಕೊಳ್ಳಬೇಕು. ನಮ್ಮ ಪೂರ್ವಿಕರ ಜ್ಞಾನ ಸಂಪತ್ತನ್ನು ಮಕ್ಕಳಿಗೆ ತಿಳಿಸಬೇಕು. 18 ವರ್ಷದವರೆಗೂ ಶಿಕ್ಷಣ ಕಡ್ಡಾಯಗೊಳಿಸಬೇಕು. ವಾರ್ಷಿಕ ₹ 20,000 ಕೋಟಿ ಅನುದಾನ ಮೀಸಲಿಡಬೇಕು ಎಂಬಿತ್ಯಾದಿ ಪ್ರಮುಖ ಅಂಶಗಳು ಎನ್‌ಇಪಿಯಲ್ಲಿ ಅಡಕಗೊಂಡಿವೆ’ ಎಂದು ಸಿಂದನಕೇರ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.