ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಗುತ್ತಿಗೆಗೆ ಹೊಸ ವ್ಯವಸ್ಥೆ

Last Updated 29 ಜುಲೈ 2022, 12:36 IST
ಅಕ್ಷರ ಗಾತ್ರ

ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗವು ವಾಣಿಜ್ಯ ಗುತ್ತಿಗೆಗೆ ಹೊಸ ವ್ಯವಸ್ಥೆ ಅಳವಡಿಸಿಕೊಂಡಿದೆ.

ತನ್ನ ನಿಲ್ದಾಣ ಮತ್ತು ರೈಲುಗಳಲ್ಲಿ ಜಾಹೀರಾತು, ವಾಹನಗಳ ನಿಲುಗಡೆ, ಪಾರ್ಸೆಲ್ ಸ್ಥಳದ ಗುತ್ತಿಗೆ, ಎಟಿಎಂ ಒಪ್ಪಂದಗಳು ಮತ್ತು ಪಾವತಿ ಮಾಡಿ ಉಪಯೋಗಿಸುವ ಶೌಚಾಲಯಗಳ ಗುತ್ತಿಗೆಗಳಿಗೆ ಈ ಹಿಂದೆ ಇದ್ದ ಇ-ಟೆಂಡರ್ ಪ್ರಕ್ರಿಯೆ ವ್ಯವಸ್ಥೆಯ ಬದಲಿಗೆ ವಾಣಿಜ್ಯ ಗುತ್ತಿಗೆಗಳನ್ನು ನೀಡುವ ಇ-ಹರಾಜು ವಿಧಾನ ಬಳಸಿಕೊಳ್ಳಲಿದೆ.

ಆಹಾರ ಮಳಿಗೆಗಳು ಮತ್ತು ಇತರ ಬಹು ವಸ್ತು ಮಳಿಗೆಗಳ ನಿರ್ವಹಣೆಗಾಗಿ ಗುತ್ತಿಗೆಗಳನ್ನು ನೀಡುವುದು ಮಾತ್ರ ಸದ್ಯಕ್ಕೆ ಇ-ಟೆಂಡರಿಂಗ್ ಪ್ರಕ್ರಿಯೆಯ ಅಡಿಯಲ್ಲಿ ಮುಂದುವರಿಯುತ್ತದೆ. ಇ-ಹರಾಜು ವ್ಯವಸ್ಥೆಯನ್ನು ರೈಲ್ವೆಯ ಕೇಂದ್ರ ಮಾಹಿತಿ ವ್ಯವಸ್ಥೆ ಸಂಸ್ಥೆಯು ಅಭಿವೃದ್ಧಿಪಡಿಸಿದ ಐಆರ್‌ಇಪಿಎಸ್‌ ಪೋರ್ಟಲ್‌ನಲ್ಲಿ ರೈಲ್ವೆ ಮಂಡಳಿ ನೀಡಿರುವ ನಿಯಮಗಳ ಪ್ರಕಾರ ನಡೆಸಲಾಗುತ್ತದೆ ಎಂದು ವಿಭಾಗದ ಪ್ರಕಟಣೆ ತಿಳಿಸಿದೆ.

ಇ–ಹರಾಜಿನಲ್ಲಿ ಭಾಗವಹಿಸುವವರು ಎಸ್‌ಬಿಐನಲ್ಲಿ ಚಾಲ್ತಿ ಖಾತೆ ತೆರೆಯಬೇಕು ಮತ್ತು ಒಂದು ಬಾರಿ ನೋಂದಣಿ ಶುಲ್ಕವಾದ ₹ 10ಸಾವಿರ (ಜೊತೆಗೆ ಶೇ 18 ಜಿಎಸ್‌ಟಿ) ಪಾವತಿಸಿ ಐಆರ್‌ಇಪಿಎಸ್‌ ಪೋರ್ಟಲ್ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಯಾವುದೇ ಇತರ ಶುಲ್ಕಗಳನ್ನು ಪಾವತಿಸದೆ, ಭಾರತೀಯ ವಿಭಾಗಗಳ ಯಾವುದೇ ವಾಣಿಜ್ಯ ಟೆಂಡರ್‌ನಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಲಾಗುತ್ತದೆ. ಹೊಸ ವ್ಯವಸ್ಥೆಯು ಹಿಂದಿನ ಟೆಂಡರ್ ವ್ಯವಸ್ಥೆಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ಮೈಸೂರು ವಿಭಾಗವು ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ ಇ-ಹರಾಜು ಮೂಲಕ 6 ಜಾಹೀರಾತು ಗುತ್ತಿಗೆಗಳನ್ನು ನೀಡಿದೆ. ಹೆಚ್ಚಿನ ವಿವರವನ್ನು www.ireps.gov.in. ಜಾಲತಾಣದಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT