ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರ: ‘40 ಸಾವಿರ ಮತದಾರರ ವಿಳಾಸವೇ ಇಲ್ಲ’- ಆರೋಪ

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋ‍ಪ
Last Updated 24 ಮೇ 2022, 10:11 IST
ಅಕ್ಷರ ಗಾತ್ರ

ಮೈಸೂರು: ‘ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 40 ಸಾವಿರ ಮತದಾರರ ವಿಳಾಸ ಸರಿಯಿಲ್ಲ. ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಲೋಪ ಸರಿಪಡಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಹೈಕೋರ್ಟ್‌ ಮೊರೆ ಹೋಗಲಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

‘ಕ್ಷೇತ್ರದಲ್ಲಿ 1.33 ಲಕ್ಷ ಮತದಾರರಿದ್ದಾರೆ. ವಿಳಾಸ ನಮೂದಿಸದ ಮತದಾರರಿಗೆ ಫೋನ್‌ ಕರೆ ಮಾಡಿದರೆ, ಎಷ್ಟೋ ಮಂದಿ ಪದವಿಯನ್ನೇ ಪಡೆದಿಲ್ಲ. ಈ ಕುರಿತು ಆಯೋಗಕ್ಕೆ ದೂರು ನೀಡಲಾಗಿದೆ. ಆಯೋಗ ತನಿಖೆ ನಡೆಸಿ ಪಾರದರ್ಶಕ ಚುನಾವಣೆ ನಡೆಸಬೇಕು’ ಎಂದು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ವಿಳಾಸವಿಲ್ಲದೆಯೇ ಹೇಗೆ ನೋಂದಣಿ ಮಾಡಲಾಯಿತು ಎಂಬುದನ್ನು ಆಯೋಗ ವಿವರಿಸಬೇಕು. ಮತದಾರರ ಭಾವಚಿತ್ರ ಪ‍ರಿಶೀಲಿಸಿಯೇ ಮತ ಚಲಾವಣೆಗೆ ಅವಕಾಶ ನೀಡಬೇಕು. ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರು ನಕಲಿ ಮತವನ್ನು ಚಲಾಯಿಸಲಿದ್ದಾರೆ. ಈ ಕುರಿತು ಎಚ್ಚರಿಕೆ ವಹಿಸಬೇಕು’ ಎಂದರು.

ಗೊಂದಲವಿಲ್ಲ: ‘ಪಕ್ಷದ ಅಭ್ಯರ್ಥಿ ಘೋಷಣೆಯಿಂದಾಗಿ ಬಿಜೆಪಿ, ಜೆಡಿಎಸ್‌ನಲ್ಲಿ ಗೊಂದಲ ಉಂಟಾಗಿದೆ. ಅಲ್ಲಿನ ಟಿಕೆಟ್‌ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನ ನಾಲ್ಕು ಜಿಲ್ಲೆಗಳ ಮುಖಂಡರು ಎಂಟು ತಿಂಗಳ ಹಿಂದೆಯೇ ಮಧು ಜಿ.ಮಾದೇಗೌಡ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್‌ನ ಮರಿತಿಬ್ಬೇಗೌಡ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಹೀಗಾಗಿ ಪಕ್ಷ ಗೆಲ್ಲಲಿದೆ’ ಎಂದು ಲಕ್ಷ್ಮಣ ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸನ್ನು ಯಥಾವತ್‌ ಜಾರಿ ಮಾಡಿದೆ. 2017ರಲ್ಲಿ 6.5 ಲಕ್ಷ ಸರ್ಕಾರಿ ನೌಕಕರ ವೇತನವನ್ನು ಶೇ 30 ರಷ್ಟು ಹೆಚ್ಚಿಸಿದೆ. ಉಪನ್ಯಾಸಕರಿಗೆ ವೇತನ ತಾರತಮ್ಯ ಹೋಗಲಾಡಿಸಲು ರಚಿಸಲಾಗಿದ್ದ ಕುಮಾರ ನಾಯ್ಕ್‌ ಆಯೋಗದ ವರದಿ ಜಾರಿಗೊಳಿಸಿದೆ. ಬಿಜೆಪಿ ಎನ್‌ಪಿಎಸ್‌ ಜಾರಿಗೊಳಿಸಿ ಪಿಂಚಣಿದಾರರನ್ನು ಬೀದಿಗೆ ತಂದಿದೆ. ರಾಜಸ್ಥಾನ ಮತ್ತು ಛತ್ತೀಸಗಡದ ಕಾಂಗ್ರೆಸ್‌ ಸರ್ಕಾರಗಳು ಹಳೇ ಪಿಂಚಣಿ ವ್ಯವಸ್ಥೆಯನ್ನೇ ಮರು ಜಾರಿಗೊಳಿಸಿವೆ. ರಾಜ್ಯದಲ್ಲೂ 2023ರಲ್ಲಿ ಬೇಡಿಕೆ ಈಡೇರಿಸಲಾಗುವುದು’ ಎಂದರು.

‘ಸಚಿವ ಅಶ್ವತ್ಥನಾರಾಯಣ ಅವರು ಮಂಡ್ಯದ ಕಾಲೇಜೊಂದರಲ್ಲಿ ಸರ್ಕಾರಿ ಅಧಿಕಾರಿಗಳ ಎದುರೇ ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ತಾಕೀತು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕ್ರಮ ಜರುಗಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಂ.ಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌, ಮುಖಂಡ ಶಿವಣ್ಣ ಇದ್ದರು.

‘₹ 100 ಕೋಟಿ ಯೋಜನೆಯನ್ನೂ ತಂದಿಲ್ಲ’: ‘ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆಯೇನು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಮೈಸೂರು ನಗರದಲ್ಲಿ ₹ 3,800 ಕೋಟಿ ವೆಚ್ಚದ ಕಾಮಗಾರಿ ನಡೆಸಲಾಗಿದೆ. ಬಿಜೆಪಿ ಸರ್ಕಾರದ ₹ 100 ಕೋಟಿ ಯೋಜನೆಯನ್ನು ತೋರಿಸಲಿ’ ಎಂದು ಲಕ್ಷ್ಮಣ ಸವಾಲು ಹಾಕಿದರು.

‘ಜಿಲ್ಲೆಗೆ ಕಾಂಗ್ರೆಸ್‌ನ ಐದು ವರ್ಷದ ಆಡಳಿತ ಅವಧಿಯಲ್ಲಿ ₹ 22 ಸಾವಿರ ಕೋಟಿ ಬಿಡುಗಡೆಯಾಗಿತ್ತು. ಅಭಿವೃದ್ಧಿ ಜನರ ಕಣ್ಣ ಮುಂದಿದೆ’ ಎಂದು ವಿವಿಧ ಯೋಜನೆಗಳ ಮಾಹಿತಿ ಪತ್ರವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT