ಶುಕ್ರವಾರ, ಮೇ 20, 2022
19 °C

ನಾಯಕತ್ವ ಬದಲಾವಣೆ ಚರ್ಚೆ ಅಗತ್ಯವಿಲ್ಲ: ಬಿ.ವೈ. ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮುಖ್ಯಮಂತ್ರಿ ವಿಚಾರದಲ್ಲಿ ಪದೇಪದೆ ಚರ್ಚೆ ಮಾಡುವ ಅಗತ್ಯವಿಲ್ಲ. ಈಗಾಗಲೇ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು ಹೇಳಿರುವಂತೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅವಧಿ ಪೂರೈಸುತ್ತಾರೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ಆಡಳಿತ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂಬುದಾಗಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಹೇಳಿದ್ದಾರೆ. ಹೀಗಾಗಿ, ನಾಯಕತ್ವ ಬದಲಾವಣೆಯ ಚರ್ಚೆ ಅಗತ್ಯವಿಲ್ಲ’ ಎಂದರು.

‘ದೆಹಲಿಗೆ ಭೇಟಿ ನೀಡಿದ್ದಕ್ಕೆಲ್ಲಾ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ. ಕೆಲವರು ತಮ್ಮದೇ ಆದ ಕೆಲಸ ಕಾರ್ಯಗಳಿಗೆ ಹೋಗಿರುತ್ತಾರೆ’ ಎಂದು ತಿಳಿಸಿದರು. 

ರಾಜ್ಯ ಸರ್ಕಾರ ಕೋವಿಡ್‌ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ‘8–10 ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ವಿದ್ಯಮಾನ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿರುವ ಇವರು ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆಯಲ್ಲಿ ತೊಡಗಿರುವುದು ಹಾಸ್ಯಾಸ್ಪದ. ಹೀಗಿದ್ದೂ, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಕೋವಿಡ್‌ ವಿಚಾರದಲ್ಲಿ ಜನರಿಗೆ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಹಾದಿಬೀದಿಯಲ್ಲಿ ಮುಖ್ಯಮಂತ್ರಿ ವಿಚಾರ ಚರ್ಚಿಸುತ್ತಿದ್ದಾರೆ. ಈ ಪಕ್ಷಕ್ಕೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ‌’ ಎಂದು ತಿರುಗೇಟು ನೀಡಿದರು.

‘ಯಡಿಯೂರಪ್ಪ ಅವರು ನಾಡಿನ ಎಲ್ಲಾ ವರ್ಗಗಳಿಗೆ ಪ್ಯಾಕೇಜ್‌ ಘೋಷಣೆ ಮಾಡಿ ನೆರವಿಗೆ ನಿಂತಿದ್ದಾರೆ. ಕೇಂದ್ರ ಸರ್ಕಾರ ಕೂಡ ಪ್ಯಾಕೇಜ್‌ ಘೋಷಿಸಿದೆ’ ಎಂದು ನುಡಿದರು. 

ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ವಿಚಾರದ ಬಗ್ಗೆ, ‘ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಎಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೆಂಬುದನ್ನು ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ. ನಾನು ಪಕ್ಷ ಸಂಘಟನೆಯಲ್ಲಿ ತೊಡಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ವರುಣಾ ಕ್ಷೇತ್ರಕ್ಕೂ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು