ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗೂ ಇಲ್ಲ ಮಾಸ್ಕ್‌: ಆತಂಕದಲ್ಲಿ ಸಿಬ್ಬಂದಿ

ಮೈಸೂರಿನ ಕೆಲವು ಖಾಸಗಿ ಆಸ್ಪತ್ರೆಗಳ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಪರದಾಟ
Last Updated 31 ಮಾರ್ಚ್ 2020, 5:37 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು, ರೋಗಿಗಳ ರಕ್ಷಣೆಗೆ ಶ್ರಮಿಸುವ ಖಾಸಗಿ ವೈದ್ಯರಿಗೆ ಸೂಕ್ತ ಮಾಸ್ಕ್‌ ಮತ್ತು ಪರ್ಸನಲ್‌ ಪ್ರೊಟೆಕ್ಟಿವ್‌ ಎಕ್ಯೂಪ್‌ಮೆಂಟ್‌ಗಳ (ಪಿಪಿಇ) ಕೊರತೆ ಕಾಡುತ್ತಿದೆ.

ಮೈಸೂರಿನ ಔಷಧಿ ಅಂಗಡಿಗಳಲ್ಲೂ ಮಾಸ್ಕ್‌ಗಳ ಕೊರತೆಯಿದೆ. ದುಪ್ಪಟ್ಟು, ಮೂರರಷ್ಟು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ. ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಹಾಗೂ ಕೋವಿಡ್‌ 19 ಪೀಡಿತರ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್‌ ಮತ್ತು ಪಿಪಿಇ ಸೌಲಭ್ಯವನ್ನು ಜಿಲ್ಲಾಡಳಿತ ತುರ್ತಾಗಿ ಒದಗಿಸಬೇಕಿದೆ ಎಂಬ ಬೇಡಿಕೆ ವೈದ್ಯಕೀಯ ವಲಯದಿಂದ ಕೇಳಿ ಬಂದಿದೆ.

‘ಕೊರೊನಾ ವಿರುದ್ಧದ ಹೋರಾಟಕ್ಕೆ ನಾವೂ ಕೈಜೋಡಿಸಿದ್ದೇವೆ. ಆದರೆ, ಮಾಸ್ಕ್‌ ಹಾಗೂ ಪಿಪಿಇ ಸೌಲಭ್ಯವನ್ನು ಸರ್ಕಾರ ಒದಗಿಸಬೇಕಿದೆ. ದುರಾದೃಷ್ಟವೆಂದರೆ ನಮಗೆ ಮಾಸ್ಕ್‌ ಇಲ್ಲದೆ ಆತಂಕದಲ್ಲಿ ಕೆಲಸ ಮಾಡುವಂತಾಗಿದೆ. ನರ್ಸ್‌ಗಳು, ಡಿ ಗ್ರೂಪ್‌ ನೌಕರರಿಗೂ ಸರ್ಜಿಕಲ್‌ಮಾಸ್ಕ್‌ ಕೊರತೆ ಕಾಡುತ್ತಿದೆ. ಎನ್‌–95 ಮಾಸ್ಕ್‌ ಅನ್ನು ವಿತರಿಸಬೇಕು’ ಎಂದು ಹೆಸರು ಹೇಳಲು ಬಯಸದ ಸರ್ಜನ್‌ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರಿಗೂ ಸರ್ಜಿಕಲ್‌ ಮಾಸ್ಕ್‌ ಸಿಗುವಂತಾಗಬೇಕು. ಎಲ್ಲೆಂದರಲ್ಲಿ ಖರೀದಿಸಿ ಹಾಕಿಕೊಳ್ಳಬಾರದು. ಕೆಲವರು ಮಾಸ್ಕ್‌ ಬದಲು ಕರವಸ್ತ್ರವನ್ನೇ ಕಟ್ಟಿಕೊಂಡು ಓಡಾಡುತ್ತಿದ್ದಾರೆ. 15 ದಿನಗಳ ಹಿಂದೆ ಮೂರು ಪಟ್ಟು ಹೆಚ್ಚಿಗೆಹಣ ಕೊಟ್ಟು ಮಾಸ್ಕ್‌ ಖರೀದಿಸಿದ್ದೆ. ಖಾಸಗಿ ಆಸ್ಪತ್ರೆಗಳಲ್ಲಿ ಫ್ಲೂ ಕ್ಲಿನಿಕ್‌ಗಳನ್ನು ತೆರೆದು ಸ್ಕ್ರೀನಿಂಗ್‌ ಮಾಡುತ್ತಿದ್ದೇವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್‌ ಹಾಗೂ ಪಿಪಿಇ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಜಿಲ್ಲಾಡಳಿತಕ್ಕೆ ಮೊರೆಯಿಟ್ಟರು.

‘15 ದಿನಗಳಿಂದ ಮಾಸ್ಕ್‌ಗಳ ಕೊರತೆಯಿದೆ. ಕಂಪನಿಯವರು ಸ್ಟಾಕ್‌ ಇಲ್ಲ ಎಂದು ಹೇಳುತ್ತಿದ್ದಾರೆ. ಸಾರ್ವಜನಿಕರು ಮೂರು, ನಾಲ್ಕು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಎಲ್ಲಾ ಕಡೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳ ಅಭಾವ ಇದೆ’ ಎನ್ನುತ್ತಾರೆ ಕೃಷ್ಣಮೂರ್ತಿಪುರಂ ಔಷಧಿ ಅಂಗಡಿ ಮಾಲೀಕ ನಟರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT