ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಗಡಿಭಾಗದಲ್ಲಿ ಇಲ್ಲ ಪೊಲೀಸ್ ಠಾಣೆ

50ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ದೂರು ನೀಡಲು ಬರಬೇಕು: ಗ್ರಾಮಸ್ಥರ ಅಳಲು
Last Updated 3 ಜೂನ್ 2020, 9:59 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆಯಲ್ಲಿ ಪೊಲೀಸ್ ಠಾಣೆಯಾಗಲಿ, ಕನಿಷ್ಠ ಹೊರ ಠಾಣೆಯಾಗಲಿ ಇಲ್ಲ. ಇಲ್ಲಿರುವ 11 ಗ್ರಾಮ ಹಾಗೂ 12 ಹಾಡಿಗಳ ಸುಮಾರು ಏಳು ಸಾವಿರಕ್ಕೂ ಅಧಿಕ ಜನ ದೂರು ನೀಡಲು 50 ಕಿ.ಮೀ.ಗೂ ಹೆಚ್ಚು ಕ್ರಮಿಸಬೇಕಿದೆ.

ಪೊಲೀಸ್ ಠಾಣೆ ಇಲ್ಲದಿರುವುದರಿಂದ ಈ ಭಾಗಕ್ಕೆ ಕೇರಳದಿಂದ ಜನ ಬಂದು ಮದ್ಯವನ್ನು ಅಕ್ರಮವಾಗಿ ಖರೀದಿಸುತ್ತಿದ್ದಾರೆ. ಜೂಜಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ಗಳೂ ನಡೆಯುತ್ತಿವೆ. ಪೊಲೀಸ್ ಠಾಣೆ ಬಹುದೂರದಲ್ಲಿ ಇರುವುದರಿಂದ ಈ ಕುರಿತು ದೂರು ನೀಡಲು ಯಾರೂ ಮುಂದೆ ಬರುವುದಿಲ್ಲ.

ಬೇಸಿಗೆಯಲ್ಲಿ ಕಪಿಲಾ ನದಿಯಲ್ಲಿ ನಡೆದುಕೊಂಡೇ ಬರುತ್ತಾರೆ. ಮುಂಗಾರು ಆರಂಭವಾದ ಮೇಲೆ ತೆಪ್ಪದಲ್ಲಿ ಬಂದು ಹೋಗುತ್ತಾರೆ. ಪೊಲೀಸರಿಲ್ಲ ಎಂಬ ಕಾರಣಕ್ಕೆ ವನ್ಯ ಜೀವಿಗಳ ಬೇಟೆ, ಮರ ಕಡಿಯುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಅಂತರಸಂತೆಯಲ್ಲಿ ಒಂದು ಹೊರಠಾಣೆ ಇದೆ. ಆದರೆ, ಅದು ಕೂಡ ಡಿ.ಬಿ.ಕುಪ್ಪೆಗೆ 35 ಕಿ.ಮೀ ದೂರದಲ್ಲಿದೆ. ದೂರು ದಾಖಲಿಸಬೇಕಾದರೆ 53 ಕಿ.ಮೀ ದೂರದಲ್ಲಿರುವ ಬೀಚನಹಳ್ಳಿ ಠಾಣೆಗೆ ಜನರು ಬರಬೇಕಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇದೆ. ಈ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿ.ಬಿ.ಕುಪ್ಪೆ ವ್ಯಾಪ್ತಿಯ ಬಹಳಷ್ಟು ಗ್ರಾಮಸ್ಥರು, ‘ನಮಗೊಂದು ಪೊಲೀಸ್ ಠಾಣೆ ಬೇಕು. ಕನಿಷ್ಠ ಹೊರಠಾಣೆಯನ್ನಾದರೂ ಕೊಡಿ’ ಎಂದು ಮನವಿ ಮಾಡಿದರು.

‘ಗಲಾಟೆಗಳು, ಅನ್ಯಾಯಗಳು ಇಲ್ಲೂ ನಡೆಯುತ್ತಿವೆ. ಸಮೀಪದಲ್ಲಿ ಪೊಲೀಸ್ ಠಾಣೆ ಇಲ್ಲದಿರುವುದರಿಂದ ಬಹಳಷ್ಟು ಮಂದಿ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಅನ್ಯಾಯವನ್ನು ಮೌನವಾಗಿಯೇ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT