ಮಂಗಳವಾರ, ಜೂನ್ 22, 2021
24 °C
ಅಪಾಯ ಹೊತ್ತೊಯ್ಯುತ್ತಿರುವ ಆತಂಕದಲ್ಲಿ ಕೊರೊನಾ ಯೋಧರು

‘ಸೌಲಭ್ಯ ಕೇಳಲು ಮನಸಿಲ್ಲ’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಎರಡನೇ ಅಲೆಯ ಈ ಹೊತ್ತಿನಲ್ಲಿ ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ, ಆಮ್ಲಜನಕ ಸಿಗುತ್ತಿಲ್ಲ, ಚುಚ್ಚುಮದ್ದಿನ ಕೊರತೆ; ಲಸಿಕೆಗಾಗಿ ನೂಕುನುಗ್ಗಲು ಎಂದೆಲ್ಲ ಕೇಳುತ್ತಿದ್ದೇವೆ. ಇಂಥ ಸ್ಥಿತಿಯಲ್ಲಿ, ‘ಕೊರತೆ’ಗಳ ಬಗ್ಗೆ ದೂರದೇ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವವರು ಕೊರೊನಾ ಯೋಧರು– ಶುಶ್ರೂಷಕರು.

ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಅವರಿಗೆ ಅಪಾಯದ ಅರಿವಿದೆ; ದುರಿತ ಕಾಲದಲ್ಲಿ ರೋಗಿಗಳ ಸೇವೆಗೆ ನಿಲ್ಲಲು ಸಾಧ್ಯವಾದ ಬಗ್ಗೆ ಹೆಮ್ಮೆಯೂ ಇದೆ. ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುವಾಗ, ತಾವು ಕುಟುಂಬದವರಿಗೂ ಅಪಾಯವನ್ನು ಕೊಂಡೊಯ್ಯುತ್ತಿದ್ದೇವಾ ಎಂಬ ಆತಂಕವಿದೆ. ಇದನ್ನು ನಿವಾರಿಸಿದರೆ ಒಳ್ಳೆಯದು ಎಂಬ ಬೇಡಿಕೆ ಬಿಟ್ಟರೆ, ಈಡೇರಿಸಲಾರದಂಥ ಬೇರಾವ ಸೌಲಭ್ಯವನ್ನೂ ಕೇಳಲು ಅವರು ಒಲ್ಲರು.

ಕೋವಿಡ್‌ನ ಮೊದಲನೇ ಅಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶುಶ್ರೂಷಕರಿಗೆ ಕ್ವಾರಂಟೈನ್ ಪದ್ಧತಿ ಇತ್ತು. ಕೋವಿಡ್‌ ರೋಗಿಗಳ ಆರೈಕೆ ಮಾಡಿದ ಶುಶ್ರೂಷಕರು ಕಡ್ಡಾಯವಾಗಿ ಮತ್ತೆ ಒಂದು ವಾರ ಕಾಲ, ಜಿಲ್ಲಾಡಳಿತ ನಿಗದಿ ಮಾಡಿದ್ದ ಹೋಟೆಲ್‌ ಅಥವಾ ಸ್ಥಳಗಳಲ್ಲಿ ಕ್ವಾರಂಟೈನ್‌ ಆಗಿ ಇರುತ್ತಿದ್ದರು. ಎರಡನೇ ಅಲೆ ಹೊತ್ತಿನಲ್ಲಿ ರಜೆ ಸಿಗದ ಪರಿಸ್ಥಿತಿ ಇದೆ. ಇದರೊಂದಿಗೆ, ಕೋವಿಡ್‌ ರೋಗಿಗಳ ಆರೈಕೆ ಮಾಡಿ, ನೇರ ಮನೆಗೇ ಹೋಗಬೇಕಾಗಿದೆ.

‘ನನ್ನ ತಾಯಿಗೆ 90 ವರ್ಷ. ಪತಿಗೆ ಹೃದಯ ಸಂಬಂಧಿ ರೋಗ. ಮಗನಿಗೆ ಶ್ರವಣ ದೋಷ. ನಿತ್ಯವೂ ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯ. ಇದೀಗ ಅನೇಕರಿಗೆ ಆಸ್ಪತ್ರೆಯಲ್ಲಿ ಹಾಸಿಗೆಯೇ ಸಿಗದ ಪರಿಸ್ಥಿತಿ. ಇಂತಹ ಹೊತ್ತಿನಲ್ಲಿ ನಾವು ಕೋವಿಡ್‌ ಪೀಡಿತರ ಆರೈಕೆ ಮಾಡಿ, ಮನೆಗೆ ಹೋಗುತ್ತಿರುವುದು ಅಪಾಯವನ್ನು ನಾವೇ ಹೊತ್ತೊಯ್ದಂತಾಗುತ್ತಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಮೈಸೂರು ವೈದ್ಯಕೀಯ ಕಾಲೇಜಿನ ಹಿರಿಯ ಶುಶ್ರೂಷಕರೊಬ್ಬರು.

‘ಮಾರಕ ವೈರಸ್‌ ನಿಯಂತ್ರಣಕ್ಕಾಗಿ, ಒಂದು ಕಾಲು ವರ್ಷದಿಂದಲೂ ಅಹೋರಾತ್ರಿ ಶ್ರಮಿಸುತ್ತಿದ್ದೇವೆ. ಇದು, ನಮ್ಮ ಕರ್ತವ್ಯ. ಈ ಹೋರಾಟದಲ್ಲಿ ಇದೀಗ ನಮ್ಮ ಕುಟುಂಬವೇ ನಿತ್ಯ ಆತಂಕ ಎದುರಿಸುತ್ತಿದೆ. ಕುಟುಂಬದಲ್ಲಿ ಅನಾಹುತ ಘಟಿಸಿದರೆ, ದುರಂತಕ್ಕೆ ನಾವೇ ಕಾರಣವಾಗುತ್ತೀವಲ್ಲವೇ?’ ಎನ್ನುತ್ತಾರೆ ಬಹುತೇಕ ಶುಶ್ರೂಷಕರು.

‘ಈಗಾಗಲೇ ನಮಗೆ ಕೋವಿಡ್ ಲಸಿಕೆ ಹಾಕಿದ್ದಾರೆ. ಅಷ್ಟು ಅಪಾಯವಿಲ್ಲ. ಆದರೆ, ನಮ್ಮ ಮನೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಸಿಗದವರೇ ಹೆಚ್ಚಿದ್ದಾರೆ. ಲಸಿಕೆ ಹಾಕಿದ್ದರೆ, ನಮ್ಮ ಆತಂಕವಾದರೂ ತಪ್ಪುತ್ತಿತ್ತು’ ಎಂದು ಪಿಕೆಟಿಬಿ ಆಸ್ಪತ್ರೆಯ ಹಿರಿಯ ಶುಶ್ರೂಷಕ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ ಕರ್ತವ್ಯ ನಿರ್ವಹಿಸು ವವರಿಗೆ ರಿಸ್ಕ್‌ ಅಲೊಯನ್ಸ್‌ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದುವರೆಗೂ ಶುಶ್ರೂಷಕ ಅಧಿಕಾರಿಗಳಿಗೆ ಈ ಭತ್ಯೆ ಸಿಕ್ಕಿಲ್ಲ‌’ ಎಂದು ಕೆ.ಆರ್.ಆಸ್ಪತ್ರೆಯ ಶುಶ್ರೂಷಕಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು