ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕೆ.ಜಿಗೆ ಚಿನ್ನ ವಂಚಿಸಿದ ಆರೋಪಿ ಬಂಧನ

ಅಂಗಡಿ ತೆರೆದು ನಂಬಿಕೆ ಗಳಿಸಿಕೊಂಡಿದ್ದ ಕೇರಳ ರಾಜ್ಯದ ವಂಚಕ
Last Updated 27 ಆಗಸ್ಟ್ 2020, 4:45 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಲಷ್ಕರ್‌ ಮೊಹಲ್ಲಾದ ಗರಡಿಕೇರಿಯಲ್ಲಿ ಅಂಗಡಿಯೊಂದನ್ನು ತೆರೆದು ನಂಬಿಕೆ ಹುಟ್ಟಿಸಿ ಚಿನ್ನ ಖರೀದಿಯ ನೆಪದಲ್ಲಿ ಮಾತಾಜಿ ಜುಯೆಲೆನ್ಸ್ ಮಾಲೀಕ ಇಂದರ್‌ಚಂದ್ರ ಎಂಬುವವರಿಂದ ಒಂದು ಕೆ.ಜಿ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿಯೊಬ್ಬನನ್ನು ಲಷ್ಕರ್‌ ಠಾಣೆ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಕಾಸರಗೋಡು ಸಮೀಪದ ಮುಟ್ಟತೋಡಿ ಗ್ರಾಮದ ಹಮೀದ್ ಅಲಿ (46) ಬಂಧಿತ ಆರೋಪಿ.

ಈತ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗರಡಿಕೇರಿಯಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡುವ ಸಣ್ಣದೊಂದು ಅಂಗಡಿ ತೆರೆದು ಸುತ್ತಮುತ್ತಲ ಪ್ರದೇಶಗಳಲ್ಲಿ ನಂಬಿಕೆ ಹುಟ್ಟಿಸಿದ್ದ. ಆಗಾಗ್ಗೆ ಸ್ವಲ್ಪ ಸ್ವಲ್ಪ ಚಿನ್ನವನ್ನು ಖರೀದಿ ಮಾಡುವ ನೆಪದಲ್ಲಿ ಮಾತಾಜಿ ಜುಯೆಲ್ಲರಿ ಅಂಗಡಿಯ ಮಾಲೀಕ ಇಂದರ್‌ ಚಂದ್ ಎಂಬುವವರ ವಿಶ್ವಾಸ ಸಂಪಾದಿಸಿದ. 2019ರ ಅಕ್ಟೋಬರ್ 31ರಂದು ಅಂಗಡಿಗೆ ಬಂದ ಈತ ಒಂದು ಕೆ.ಜಿ ಚಿನ್ನ ಖರೀದಿಸಿ ₹ 3 ಲಕ್ಷ ಹಣವನ್ನು ನೀಡಿದ. ಉಳಿದ ಹಣವು ಕಾರಿನಲ್ಲಿದ್ದು, ತಂದು ಕೊಡುವುದಾಗಿ ಹೇಳಿ, ಚಿನ್ನದ ಸಮೇತ ಪರಾರಿಯಾಗಿದ್ದ.

ಅಷ್ಟೊತ್ತಿಗೆ ಈತ ನಡೆಸುತ್ತಿದ್ದ ಚಿನ್ನದ ಅಂಗಡಿ ಬಂದ್ ಆಗಿತ್ತು. ಎಲ್ಲೆಡೆ ಹುಡುಕಾಟ ನಡೆಸಿದಾಗ ಈತನ ಸುಳಿವೇ ದೊರಕಲಿಲ್ಲ. ಕೊನೆಗೆ ಇಂದರ್‌ ಚಂದ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಸವಾಲಿನ ಪ್ರಕರಣ:

‘ನಿಜಕ್ಕೂ ಇದೊಂದು ನಮ್ಮ ಪಾಲಿಗೆ ಸವಾಲಿನ ಪ್ರಕರಣ ಎನಿಸಿತ್ತು. ಏಕೆಂದರೆ, ಆರೋಪಿ ಇಲ್ಲಿ ಯಾರ ಬಳಿಯೂ ತನ್ನ ನಿಖರ ವಿಳಾಸ ಹೇಳಿರಲಿಲ್ಲ. ಮನೆಯನ್ನೂ ಬಾಡಿಗೆಗೆ ಪಡೆದಿರಲಿಲ್ಲ’ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆರೋಪಿಗಾಗಿ ಪೊಲೀಸರು ನಗರದಲ್ಲಿರುವ ಎಲ್ಲ ವಸತಿಗೃಹಗಳು, ಹೋಟೆಲ್‌ಗಳನ್ನು ಜಾಲಾಡುತ್ತಾರೆ. ಈ ವೇಳೆ ಈತ ಒಂದು ತಿಂಗಳಿನಿಂದ ಉಳಿದುಕೊಂಡಿದ್ದ ಹೋಟೆಲ್‌ ಪತ್ತೆಯಾಗುತ್ತದೆ. ಇಲ್ಲಿ ಆತ ನೀಡಿದ್ದ ವಿಳಾಸದ ದಾಖಲೆಗಳ ಆಧಾರದ ಮೇಲೆ ಹುಡುಕಾಟ ಆರಂಭವಾಗುತ್ತದೆ.

ಇಲ್ಲಿ ನೀಡಿದ್ದ ಮೊಬೈಲ್‌ ಸಂಖ್ಯೆಯನ್ನು ನಿರಂತರವಾಗಿ ಜಾಲಾಡಿದಾಗ ಅದು ಒಂದು ಬಾರಿ ಕಾಸರಗೋಡು ವ್ಯಾಪ್ತಿಯ ಟವರ್‌ಗೆ ಸಂಪರ್ಕ ಪಡೆದದ್ದು ಗೊತ್ತಾಗುತ್ತದೆ. ತಕ್ಷಣವೇ ಪೊಲೀಸರ ತಂಡ ಅಲ್ಲಿಗೆ ತೆರಳಿ ಶೋಧ ಕಾರ್ಯ ಕೈಗೊಂಡಾಗ ಆರೋಪಿ ಹಮೀದ್ ಅಲಿ ಸಿಕ್ಕಿಬೀಳುತ್ತಾನೆ.

ಈತ ಒಂದು ಕೆ.ಜಿಗೆ ಚಿನ್ನದ ಗಟ್ಟಿಯಲ್ಲಿ ಅರ್ಧ ಕೆ.ಜಿ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಉಳಿದ ಗಟ್ಟಿಯನ್ನು 3 ಭಾಗ ಮಾಡಿ, ನಗರದ ವಿವಿಧ ಅಂಗಡಿಗಳಿಗೆ ಮಾರಾಟ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ, ಈತನಿಂದ ₹ 25 ಲಕ್ಷ ನಗದು, ಮಾರಾಟ ಮಾಡಿದ ಹಣದಿಂದ ಖರೀದಿಸಿದ್ದ ₹ 45 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‌

ದೇವರಾಜ ವಿಭಾಗದ ಎಸಿಪಿ ಶಶಿಧರ್ ಮತ್ತು ಲಷ್ಕರ್ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಬ್‌ಇನ್‌ಸ್ಪೆಕ್ಟರ್‌ಗಳಾದ ಗೌತಮ್‌ಗೌಡ, ಧನಲಕ್ಷ್ಮಿ ಮತ್ತು ಸಿಬ್ಬಂದಿಯಾದ ಮಹದೇವಸ್ವಾಮಿ, ವಿಜಯಕುಮಾರ್, ಮಹದೇವಸ್ವಾಮಿ, ಬೋಪಯ್ಯ, ರಮೇಶ್, ಮಂಜುನಾಥ್ ಕಾರ್ಯಾಚರಣೆ ತಂಡದಲ್ಲಿದ್ದರು.

ಒಂದೇ ನೋಂದಣಿ ಸಂಖ್ಯೆ ಬಳಸಿ ಎರಡು ಬಸ್ ಸಂಚಾರ

ನಂಜನಗೂಡು: ಒಂದೇ ನೋಂದಣಿ ಸಂಖ್ಯೆ ಬಳಸಿ ಎರಡು ಬಸ್‌ಗಳನ್ನು ಚಾಲನೆ ಮಾಡುತ್ತಿದ್ದ ಪ್ರಕರಣವನ್ನು ನಗರದ ಪೊಲೀಸರು ಪತ್ತೆ ಹಚ್ಚಿದ್ದು, ಎರಡೂ ಬಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ನಿಲ್ಲಿಸಿದ್ದ ಕಾಮಧೇನು ಟ್ರಾವೆಲ್ಸ್ (ಕೆ.ಎ. 11 ಬಿ. 6169) ಬಸ್‌ ವಶಕ್ಕೆ ಪಡೆದು, ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಇದೇ ನೋಂದಣಿ ಸಂಖ್ಯೆಯ ಮತ್ತೊಂದು ಬಸ್ ಮೈಸೂರಿನಲ್ಲಿ ಇರುವುದು ಗೊತ್ತಾಗಿದೆ. ಈ ಬಸ್‌ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಸರ್ಕಾರಕ್ಕೆ ವಾಹನ ತೆರಿಗೆ ವಂಚಿಸಲಾಗುತ್ತಿತ್ತು ಎಂದು ಸಿಪಿಐ ಲಕ್ಷ್ಮಿಕಾಂತ್ ತಳವಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT