ಭಾನುವಾರ, ಆಗಸ್ಟ್ 1, 2021
27 °C
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯತ್ತ ಹರಿಯದ ಪುರುಷರ ಚಿತ್ತ

ವಿಶ್ವ ಜನಸಂಖ್ಯಾ ದಿನ: ಈ ವರ್ಷ ಒಂದೇ ವ್ಯಾಸೆಕ್ಟಮಿ!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್ ಕಾರಣದಿಂದಾಗಿ ಪ್ರಸಕ್ತ ವರ್ಷ ಕೇವಲ ಒಬ್ಬರು ಮಾತ್ರ ಪುರುಷ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ‘ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ’ಗೆ ಒಳಗಾಗಿದ್ದಾರೆ. ಇಡೀ ರಾಜ್ಯದಲ್ಲಿ ಕೇವಲ 10 ಮಂದಿ ಮಾತ್ರ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಒಬ್ಬ ಪುರುಷರೂ ಅದರತ್ತ ಒಲವು ತೋರಿಲ್ಲ.

ಇಂದಿಗೂ ಮಗು ಹೆರುವಾಗಲೂ, ಅದನ್ನು ತಡೆಯುವಾಗಲೂ ಮಹಿಳೆಯರೇ ನೋವು ಅನುಭವಿಸುವಂತಹ ಸ್ಥಿತಿ ಮುಂದುವರಿದಿದೆ. ’ಗರ್ಭ ಧರಿಸದಂತೆ ತಡೆಯುವುದೂ ಮಹಿಳೆಯರ ಜವಾಬ್ದಾರಿ’ ಎಂಬ ಮನಸ್ಥಿತಿ ಬದಲಾಗಿಲ್ಲ ಎಂಬುದನ್ನೂ ಈ ಅಂಕಿ ಅಂಶ ಸೂಚಿಸುತ್ತಿದೆ.

ಮಹಿಳೆಯರ ಶಸ್ತ್ರಚಿಕಿತ್ಸೆಗಿಂತ ಅತ್ಯಂತ ಸರಳವಾದ ಹಾಗೂ ನೋವು ಕಡಿಮೆ ಇರುವ ‘ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ’ ಎಂಬ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಸರಿಸುಮಾರು ಎಲ್ಲ ಆಸ್ಪತ್ರೆಗಳಲ್ಲಿ ಪುರುಷರಿಗೆಂದೇ ಲಭ್ಯವಿದೆ. ಗಾಯ, ಹೊಲಿಗೆ ಇಲ್ಲದೇ ಕೇವಲ 5ರಿಂದ 10 ನಿಮಿಷದಲ್ಲಿ ನಿರ್ವಹಿಸಬಹುದಾದ ಚಿಕಿತ್ಸೆ ಇದು. ಚಿಕಿತ್ಸೆ ಪಡೆದ ಕೇವಲ ಅರ್ಧ ಗಂಟೆಯಲ್ಲೇ ಮನೆಗೆ ತೆರಳಬಹುದು. ಇಷ್ಟೆಲ್ಲ ಲಾಭದ ಜತೆಗೆ, ಸರ್ಕಾರ ಪ್ರೋತ್ಸಾಹ ಧನ ನೀಡಿದರೂ ‘ವ್ಯಾಸೆಕ್ಟಮಿ’ ಜನಪ್ರಿಯಗೊಂಡಿಲ್ಲ.

’ವ್ಯಾಸಕ್ಟಮಿಯಿಂದ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಪುರುಷರಲ್ಲಿರುವ ಮೂಢನಂಬಿಕೆಯೂ ಈ ಶಸ್ತ್ರಚಿಕಿತ್ಸೆ ಜನಪ್ರಿಯಗೊಳ್ಳದಿರುವುದಕ್ಕೆ ಕಾರಣ ಎನಿಸಿದೆ. ಆದರೆ, ಇದಿರಂದ ಲೈಂಗಿಕ ಸಾಮರ್ಥ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುವುದಿಲ್ಲ’ ಎಂದು ವೈದ್ಯರು ಹೇಳುತ್ತಾರೆ.

‘ಈ ಶಸ್ತ್ರಚಿಕಿತ್ಸೆಯಿಂದ ಪುರುಷರ ದೈಹಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವುದಿಲ್ಲ. ಎಲ್ಲ ಕೆಲಸವನ್ನೂ ಮೊದಲಿನಂತೆಯೇ ಮಾಡಬಹುದು. ಈ ಕುರಿತು ಸಾಕಷ್ಟು ಅರಿವು ಮೂಡಿಸಿ‌ದರೂ ಪ್ರಯೋಜನವಾಗುತ್ತಿಲ್ಲ. ಈ ಬಾರಿ ಕೋವಿಡ್‌ ಕಾರಣವೂ ವ್ಯಾಸೆಕ್ಟಮಿ ಕಡಿಮೆಯಾಗಲು ಸೇರಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ ತಿಳಿಸುತ್ತಾರೆ.

ಶಸ್ತ್ರಚಿಕಿತ್ಸೆ ಹೇಗೆ?: ವಾಸೆಕ್ಟಮಿ ಚಿಕಿತ್ಸೆಯಲ್ಲಿ, ವೃಷಣ ಕೋಶದ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ ವಾಸ್ ಡೆಫೆರೆನ್ಸ್ ನಾಳವನ್ನು ಬಂದ್ ಮಾಡುವುದು ಹಳೆಯ ವಿಧಾನ.  ‘ನೊ ಸ್ಕಾಲ್ಪೆಲ್’ ಶಸ್ತ್ರಚಿಕಿತ್ಸೆಯಲ್ಲಿ ಸಣ್ಣ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ಸಾಧ್ಯವಾಗುತ್ತದೆ. ಹೊಲಿಗೆಯ ಅವಶ್ಯಕತೆಯೂ ಇರುವುದಿಲ್ಲ.  

ವಿಶ್ವ ಜನಸಂಖ್ಯಾ ದಿನ ಇಂದು: ‘ಸಂತಾನೋತ್ಪತ್ತಿಯ ಮೇಲೆ ಕೋವಿಡ್‌–19 ಪರಿಣಾಮ’ ಎಂಬುದು ಪ್ರಸಕ್ತ ವಿಶ್ವಜನಸಂಖ್ಯಾ ದಿನದ ಘೋಷ ವಾಕ್ಯ. ವಿಶ್ವದ ಒಟ್ಟಾರೆ ಜನಜೀವನದ ಮೇಲೆ ಹಲವು ಬಗೆಯಲ್ಲಿ ಪರಿಣಾಮ ಬೀರಿರುವ ಕೋವಿಡ್‌ ಜನರ ಸಂತಾನೋತ್ಪತ್ತಿಯ ಮೇಲೂ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯಲಿರುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು