ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌ ವರ್ಕ್‌ ತರಗತಿ

ಮೈಸೂರು ವಿ.ವಿ.ಯ ಶಿಕ್ಷಣ ಮಂಡಳಿ ಸಭೆ: ಬೌದ್ಧ ಅಧ್ಯಯನ ಕೇಂದ್ರ ಆರಂಭಕ್ಕೆ ಅನುಮೋದನೆ
Last Updated 13 ಜುಲೈ 2021, 14:04 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ 2020–21ನೇ ಸಾಲಿನ ಪಿಎಚ್‌.ಡಿ ಕೋರ್ಸ್‌ ವರ್ಕ್‌ ತರಗತಿಗಳನ್ನು ಈ ಬಾರಿ ಮಾತ್ರ ಆನ್‌ಲೈನ್‌ನಲ್ಲಿ ನಡೆಸಲು, ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆ ಮಂಗಳವಾರ ಅನುಮೋದನೆ ನೀಡಿದೆ.

ತರಗತಿಗಳು ವಿಳಂಬವಾಗಿದ್ದರಿಂದ ಕೆಲವು ಸಂಶೋಧನಾರ್ಥಿಗಳು ಆನ್‌ಲೈನ್‌ನಲ್ಲಿ ಕೋರ್ಸ್‌ ವರ್ಕ್‌ ತರಗತಿ ನಡೆಸುವಂತೆ ವಿಶ್ವವಿದ್ಯಾನಿಲಯಕ್ಕೆ ಮನವಿ ಸಲ್ಲಿಸಿದ್ದರು.

ವಿದ್ಯಾರ್ಥಿಗಳ ಮನವಿ ಪುರಸ್ಕರಿಸಿದ ವಿ.ವಿ.ಯ ಶಿಕ್ಷಣ ಮಂಡಳಿ ತನ್ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಿತು. ಮಂಡಳಿಯ ಈ ನಿರ್ಧಾರದಿಂದ ಹೊರ ಜಿಲ್ಲೆ, ರಾಜ್ಯ, ವಿದೇಶದಲ್ಲಿರುವ ಮೈಸೂರು ವಿ.ವಿ.ಯ ಸಂಶೋಧನಾರ್ಥಿಗಳಿಗೆ ಅನುಕೂಲವಾಗಲಿದೆ.

ಕಾನೂನು ವಿಭಾಗದ ಡೀನ್‌ ಪ್ರೊ.ರಮೇಶ್‌, ವಿಜ್ಞಾನ ವಿಭಾಗದ ಡೀನ್ ಪ್ರೊ.ವೆಂಕಟೇಶ್ ಈ ವಿಷಯದ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಒಂದು ಬಾರಿ ಮಾತ್ರ ಆನ್‌ಲೈನ್‌ನಲ್ಲಿ ಅವಕಾಶ ಮಾಡಿಕೊಡಬೇಕಷ್ಟೇ ಎಂದು ಹೇಳಿದರು.

‘ವಿದೇಶಿ ವಿದ್ಯಾರ್ಥಿಗಳಿಗೂ ಸಹ ಆಫ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ಈ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್.ಡಿ ಕೋರ್ಸ್ ವರ್ಕ್ ಕ್ಲಾಸ್ ನಡೆಸಲಾಗುತ್ತದೆ. ಆಫ್‌ಲೈನ್ ತರಗತಿಗಳಿಗೆ ಬರುವವರು ಹಾಜರಾಗಬಹುದು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದರು.

ಧರ್ಮ ಸೂಕ್ಷ್ಮ: ಬೌದ್ಧ ಅಧ್ಯಯನ ಕೇಂದ್ರ ಆರಂಭಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ವಿಧಾನ ಪರಿಷತ್ ಸದಸ್ಯ ಆರ್‌.ಧರ್ಮಸೇನ ‘ಹಿಂದೂತ್ವ ಅಧ್ಯಯನ ಕೇಂದ್ರ’ ಆರಂಭಿಸುವಂತೆ ಪ್ರಸ್ತಾಪಿಸಿದರೆ; ಪ್ರೊ.ರಮೇಶ್ ‘ಬುದ್ಧ ಧಮ್ಮ’ ಅಧ್ಯಯನ ಕೇಂದ್ರ ಎಂದು ಹೆಸರಿಸಬಹುದೇ ಎಂಬ ಸಲಹೆ ನೀಡಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‌ಕುಮಾರ್‌ ಮಾತನಾಡಿ ‘ಧರ್ಮದ ವಿಚಾರ ತುಂಬಾ ಸೂಕ್ಷ್ಮವಾದುದು. ಯಾವುದಾದರೂ ಒಂದನ್ನು ಆರಂಭಿಸಿದರೆ, ಉಳಿದವರಿಂದಲೂ ಬೇಡಿಕೆ ಸಲ್ಲಿಕೆಯಾಗುತ್ತದೆ. ಧರ್ಮದ ಹೆಸರಿನಲ್ಲಿ ಬೇಡವೇ ಬೇಡ’ ಎಂದರು.

ಸಭೆ ಬೌದ್ಧ ಅಧ್ಯಯನ ಕೇಂದ್ರ ಆರಂಭಕ್ಕೆ ಅನುಮೋದನೆ ನೀಡಿತು. ಕೇಂದ್ರ ಆರಂಭಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆ ನಡೆಸಲು ವಿಶ್ವವಿದ್ಯಾನಿಲಯವೇ ₹ 5 ಲಕ್ಷ ಭರಿಸಲಿದೆ. ಹೆಚ್ಚಿನ ನೆರವು, ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಹೇಳಿದರು.

₹ 374 ಕೋಟಿ ಉಳಿತಾಯ

ಮೈಸೂರು ವಿಶ್ವವಿದ್ಯಾನಿಲಯದ 25 ಖಾತೆಗಳಲ್ಲಿ 2020–21ನೇ ಸಾಲಿನಲ್ಲಿ ₹ 374 ಕೋಟಿ ಉಳಿತಾಯವಿದೆ ಎಂದು ಹಣಕಾಸು ವಿಭಾಗದ ಅಧಿಕಾರಿಗಳು ಸಭೆಗೆ ವಾರ್ಷಿಕ ಲೆಕ್ಕ ಮಂಡಿಸಿದರು.

ಆರಂಭಿಕ ಉಳಿತಾಯ ₹ 507 ಕೋಟಿಯಷ್ಟಿತ್ತು. ವಿವಿಧ ಮೂಲಗಳಿಂದ ₹ 812 ಕೋಟಿ ಆದಾಯ ಬಂದಿದೆ. ಒಟ್ಟು ₹ 946 ಕೋಟಿ ವೆಚ್ಚವಾಗಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ₹ 374 ಕೋಟಿ ಉಳಿತಾಯವಿದೆ ಎಂಬ ಮಾಹಿತಿಯ ವಿವರ ನೀಡಿದರು.

ಪ್ರಮುಖ ಆದಾಯ–ವೆಚ್ಚಗಳನ್ನು ಅಧಿಕಾರಿಗಳು ಸಭೆಗೆ ತಿಳಿಸಿದರು.

ಕುಲಸಚಿವ (ಆಡಳಿತ) ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಜ್ಞಾನಪ್ರಕಾಶ್‌, ಶಿಕ್ಷಣ ಮಂಡಳಿ ಸದಸ್ಯರಾದ ಪ್ರೊ.ಮುಜಾಫರ್ ಅಸಾದಿ, ಪ್ರೊ.ನಿರಂಜನ್‌ ಮತ್ತಿತರರಿದ್ದರು.

ವಿಶೇಷ ಕೋರ್ಸ್‌ಗಳಿಗೆ ಅನುಮೋದನೆ

ಹೂಟಗಳ್ಳಿ ಕೈಗಾರಿಕಾ ವಲಯದಲ್ಲಿರುವ ಜಿಇಟಿಎಸ್ ಅಕಾಡೆಮಿಗೆ ವಿಶೇಷ ಯೋಜನೆಯಡಿ ಹೊಸ ಕೋರ್ಸ್‌ ಆರಂಭಿಸಲು ಮೈಸೂರು ವಿ.ವಿ.ಯಿಂದ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಶಿಕ್ಷಣ ಮಂಡಳಿ ಅನುಮೋದನೆ ನೀಡಿದೆ.

ಬಿಕಾಂ ನಿಂದ ಇ-ಕಾಮರ್ಸ್ ಅಂಡ್ ಡಿಜಿಟಲ್ ಮಾರ್ಕೆಟಿಂಗ್, ಫೈನಾನ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್‌, ಇಂಟರ್‌ನ್ಯಾಷನಲ್ ಅಕೌಂಟಿಂಗ್ ಅಂಡ್ ಫೈನಾನ್ಸ್, ಬಿಬಿಎ ನಿಂದ ಬ್ಯುಸಿನೆಸ್ ಅನಾಲಿಟಿಕ್ಸ್, ಸಸ್ಟೈನಬಲ್ ಡೆವಲಪ್‌ಮೆಂಟ್ ಅಂಡ್ ಎನ್‌ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಇಂಟರ್‌ನ್ಯಾಷನಲ್ ಬಿಜಿನೆಸ್ ಕೋರ್ಸ್‌ಗಳ ರೆಗ್ಯುಲೇಶನ್ ಪಠ್ಯಕ್ರಮಗಳನ್ನು ಸಿಂಡಿಕೇಟ್ ಸದಸ್ಯರ ಅನುಮತಿಯೊಂದಿಗೆ ಸಭೆ ಅನುಮೋದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT