ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮೇಲೆ ಪೈಪ್‌ಲೈನ್‌: ಸಾರ್ವಜನಿಕ ಆಕ್ಷೇಪ

ಕಪಿಲಾ ಹಳೆಯ ಸೇತುವೆ ರಕ್ಷಿಸಲು ಮನವಿ
Last Updated 13 ನವೆಂಬರ್ 2020, 2:13 IST
ಅಕ್ಷರ ಗಾತ್ರ

ತಿ.ನರಸೀಪುರ: ಪಟ್ಟಣದ ಕಪಿಲಾ ನದಿಯ ಹಳೆಯ ಸೇತುವೆ ಮೇಲೆ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.

ಪಟ್ಟಣಕ್ಕೆ 24x7 ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಬಹಳ ಹಳೆಯದಾದ ಕಪಿಲಾ ಸೇತುವೆ ಮೇಲಿನ ಒಂದು ಬದಿಯಲ್ಲಿ ದೊಡ್ಡ ಪೈಪ್‌ಗಳನ್ನು ಇಡಲಾಗಿದೆ. ಕುಡಿಯುವ ನೀರಿನ ಯೋಜನೆಯ ಸಂಪರ್ಕಕ್ಕಾಗಿ ಇದನ್ನು ಇಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣದ ನಾಗರಿಕ ಸೇವಾ ವೇದಿಕೆಯ ಮುಖಂಡರು ಸೇತುವೆ ಮೇಲೆ ಪೈಪ್‌ಗಳನ್ನು ಅಳವಡಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು

ಈ ವೇಳೆ ಮಾತನಾಡಿದ ವೇದಿಕೆಯ ಕಾರ್ಯದರ್ಶಿ ಕೆ.ಎನ್. ಪ್ರಭುಸ್ವಾಮಿ, ‘ಕಾವೇರಿ ನದಿಯಿಂದ ಪಟ್ಟಣದ ಬಡಾವಣೆಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ₹ 75 ಕೋಟಿ ನೀಡಿತ್ತು. ಅದರಡಿ ಕುಡಿಯುವ ನೀರಿನ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಆದರೆ, ಕಾವೇರಿಯಿಂದ ಪಟ್ಟಣದ ನೀರು ಶುದ್ಧೀಕರಣ ಕೆಂದ್ರಕ್ಕೆ ಸಂಪರ್ಕ ಕಲ್ಪಿಸಲು ಸೇತುವೆ ಮೇಲೆ ಪೈಪ್‌ಗಳನ್ನು ಜೋಡಿಸುವ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ ಮಳೆ ನೀರು ಸಮರ್ಪಕವಾಗಿ ಹರಿಯದೆ ಸೇತುವೆ ಮೇಲೆ ನಿಂು ಪಾರಂಪರಿಕ ಸೇತುವೆ ಹಾಳಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನೀರಿನ ಪೈಪ್‌ಲೈನ್‌ಗೆ ನದಿ ಮಧ್ಯಭಾಗದಲ್ಲಿ ಪಿಲ್ಲರ್‌ಗಳನ್ನು ಅಳವಡಿಸಿ ಅದರ ಮೇಲೆ ಪೈಪ್ ಜೋಡಿಸುವುದು ಸಾಮಾನ್ಯ ಅದರಂತೆ ಯೋಜನೆ ರೂಪಿಸಬೇಕೆ ಹೊರತು ಇರುವ ಸೇತುವೆ ಹಾಳು ಮಾಡುವ ಪ್ರಯತ್ನ ಮಾಡಬಾರದು’ ಎಂದು ಅವರು ಆಗ್ರಹಿಸಿದರು.

‘ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಮೀಟರ್ ಅಳವಡಿಸಲು ಪಟ್ಟಣದ ಎಲ್ಲಾ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಪೈಪ್ ಅಳವಡಿಕೆಯ ನಂತರ ಅವುಗಳನ್ನು ಮುಚ್ಚಿ ದುರಸ್ತಿ ಮಾಡುವ ಕೆಲಸವೂ ಆಗಿಲ್ಲ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ’ ಎಂದು ಪ್ರಭುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗೌರವಾಧ್ಯಕ್ಷ ಪಿ.ಪುಟ್ಟರಾಜು ಮಾತನಾಡಿ, ‘ಪೈಪ್ ಅಳವಡಿಕೆಗೆ ತೆಗೆದ ಗುಂಡಿಗಳನ್ನು ಮುಚ್ಚಿಸಿ ರಸ್ತೆಯನ್ನು ಸರಿಪಡಿಸಬೇಕು. ರಸ್ತೆಯ ಗುಂಡಿಗಳನ್ನು ಮಚ್ಚದೆ ತೊಂದರೆ ಮಾಡಿದ್ದಾರೆ. ಕೂಡಲೇ ಗುಂಡಿಗಳನ್ನು ಮುಚ್ಚಿಸಿ ಸರಿಪಡಿಸುವಂತೆ’ ಒತ್ತಾಯಿಸಿದರು.

‘ಪೈಪ್‌ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಪ್ರತ್ಯೇಕವಾಗಿ ಮಾರ್ಗ ನಿರ್ಮಿಸುವಂತೆ’ ಸಮಿತಿಯ ಅಧ್ಯಕ್ಷ ಎಚ್.ಆರೀಫ್ ಮನವಿ ಮಾಡಿದರು

ಸೇತುವೆಗಳ ಸಂರಕ್ಷಣೆ ಅಗತ್ಯ : 1934ರಲ್ಲಿ ತಮ್ಮ ತಾಯಿ ವಾಣಿ ವಿಲಾಸ್ ಸಾನಿಧ್ಯ ಅವರ ನೆನಪಿಗಾಗಿ ಮೈಸೂರು ಮಹಾರಾಜರು ನಿರ್ಮಿಸಿದ ಸೇತುವೆ ಇದಾಗಿದೆ. ಇದನ್ನು ಹಾಗೂ ಕಾವೇರಿ ನದಿ ಸೇತುವೆಯನ್ನು ಸ್ಮಾರಕಗಳಂತೆ ರಕ್ಷಿಸಬೇಕು ಎಂಬುಉದ ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT