ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರೈಲು ಪ್ರಯಾಣಕ್ಕೆ ಪೊಲೀಸ್‌ ‘ರಕ್ಷೆ’

‘ಸದಾ ನಿಮ್ಮ ಸೇವೆಯಲ್ಲಿ’ ಅಭಿಯಾನಕ್ಕೆ ಉತ್ತಮ ಸ್ಪಂದನೆ
Last Updated 29 ಜುಲೈ 2021, 4:49 IST
ಅಕ್ಷರ ಗಾತ್ರ

ಮೈಸೂರು: ರೈಲು ಪ್ರಯಾಣ ಮಾಡುವಾಗ ಅಹಿತಕರ ಘಟನೆಗಳು ಸಂಭವಿಸಿದರೆ ತುರ್ತು ಸ್ಪಂದನೆಗಾಗಿ ಪೊಲೀಸ್‌ ಇಲಾಖೆ, ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್‌) ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ ಕೇಂದ್ರ (ಜಿಆರ್‌ಪಿ) ವತಿಯಿಂದ ಶುರುವಾಗಿರುವ ‘ಸದಾ ನಿಮ್ಮ ಸೇವೆಯಲ್ಲಿ’ ಎಂಬ ವಿನೂತನ ಅಭಿಯಾನವು ಪ್ರಯಾಣಿಕರಲ್ಲಿ ಸಂತಸ ತಂದಿದೆ.

ಪ್ರತಿ ಪೊಲೀಸ್‌ ಸಿಬ್ಬಂದಿ ತಮ್ಮ ಮೊಬೈಲ್‌ ಫೋನ್‌, ಇಲಾಖೆಯ ಇ–ಮೇಲ್‌, ಪೊಲೀಸ್‌ ಠಾಣೆಯ ದೂರವಾಣಿ ಸಂಖ್ಯೆಯ ವಿವರಗಳುಳ್ಳ ‘ವಿಸಿಟಿಂಗ್‌ ಕಾರ್ಡ್’ ಅನ್ನು ನೇರವಾಗಿ ಪ್ರಯಾಣಿಕರಿಗೆ ನೀಡುತ್ತಿದ್ದಾರೆ. ಪ್ರಯಾಣ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆಯೇ ಅಭಿಯಾನದ ಉದ್ದೇಶವಾಗಿದೆ.

ಕಳವು, ನಿಂದನೆ, ದುರ್ವರ್ತನೆ, ಅವಘಡ ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಪ್ರಯಾಣಿಕರು ನೇರವಾಗಿ ಪೊಲೀಸರನ್ನು ಸಂಪರ್ಕಿಸಬಹುದು. ವಾಟ್ಸ್‌ಆ್ಯಪ್‌ ಸಂಖ್ಯೆಗೆ ಸಂದೇಶವನ್ನೂ ಕಳುಹಿಸಬಹುದು. ಅದಕ್ಕೆ ಪೊಲೀಸರು ತುರ್ತಾಗಿ ಸ್ಪಂದಿಸುವುದು ವಿಶೇಷ. ಹಿರಿಯ ನಾಗರಿಕರು ಮತ್ತು ಮಹಿಳೆಯರಲ್ಲಿ ಸುರಕ್ಷತೆಯ ಭಾವನೆಯೂ ಮೂಡುತ್ತಿದೆ.

‘ಮೈಸೂರು ವಿಭಾಗದ 69 ರೈಲ್ವೆ ಪೊಲೀಸ್‌ ಸಿಬ್ಬಂದಿಯು ಪ್ರಯಾಣಿಕರಿಗೆ ತಮ್ಮ ವಿಸಿಟಿಂಗ್‌ ಕಾರ್ಡ್‌ ನೀಡುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ಗಳಲ್ಲಿ ವಿವರಗಳಿವೆ’ ಎಂದು ರೈಲು ನಿಲ್ದಾಣದ ರೈಲ್ವೆ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಸ್ಪೆಕ್ಟರ್‌ ಶರಣ ಬಸವರಾಜ ಬಿರಾದಾರ್‌ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘ಅಪರಾಧ ಪ್ರಕರಣಗಳನ್ನು ತಗ್ಗಿಸಲು, ಪ್ರಯಾಣಿಕರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಲು ಹಾಗೂ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಸಾಮಾಜಿಕ ಕಳಕಳಿಯೊಂದಿಗೆ ಅಭಿಯಾನವನ್ನು ಆರಂಭಿಸಲಾಗಿದೆ.ಎಡಿಜಿಪಿ ಭಾಸ್ಕರ್‌ರಾವ್‌ ಅವರ ನಿರ್ದೇಶನದಂತೆ ಸೇವೆಯನ್ನು ಮೈಸೂರಿನಲ್ಲೂ ಒದಗಿಸಲಾಗುತ್ತಿದೆ. ರಾಜ್ಯದೆಲ್ಲಡೆ ಈ ಸೇವೆ ಇದೆ. ಯಾವುದೇ ಮೂಲೆಯಲ್ಲಿ ಅಹಿತಕರ ಘಟನೆ ಸಂಭವಿಸಿದರೂ ಪೊಲೀಸರು ರಕ್ಷಣೆಗೆ ನೆರವಾಗಲಿದ್ದಾರೆ’ ಎಂದು ತಿಳಿಸಿದರು.

‘ಮೈಸೂರಿನ 69 ಸಿಬ್ಬಂದಿಯೂ ಪ್ರಯಾಣಿಕರ ಸುರಕ್ಷತೆ ಹಾಗೂ ಕರ್ತವ್ಯ ಪಾಲನೆಗೆ ಆದ್ಯತೆ ನೀಡುತ್ತಿದ್ದಾರೆ.ಇಲಾಖೆಯ ಕೆಲಸಗಳು ಸರಳವಾಗಿವೆ. ಕಳವು ಸೇರಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಪ್ರಯಾಣಿಕರಲ್ಲೂ ವಿಶ್ವಾಸ ಮೂಡುತ್ತಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ ಟೆಕಿ ಆಗಿದ್ದು, ವಾರಂತ್ಯದಲ್ಲಿ ಮೈಸೂರಿಗೆ ಬರುತ್ತೇನೆ. ಎಷ್ಟೇ ಆತ್ಮವಿಶ್ವಾಸ ಇದ್ದರೂ ರಾತ್ರಿ ವೇಳೆ ಪ್ರಯಾಣಿಸುವಾಗ ಭಯ ಇದ್ದೇ ಇರುತ್ತದೆ. ಮೈಸೂರು– ಮಂಡ್ಯ– ಬೆಂಗಳೂರಿಗೆ ಉದ್ಯೋಗಕ್ಕಾಗಿನಿತ್ಯ ತೆರಳುವವರೂ ಇದ್ದಾರೆ. ಮಹಿಳೆಯರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ’ ಎಂದು ರಾಮಕೃಷ್ಣನಗರದ ಅನಿತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT