ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ತರಬೇತಿಯಲ್ಲೇ ಸುಧಾರಣೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Last Updated 18 ಅಕ್ಟೋಬರ್ 2019, 14:19 IST
ಅಕ್ಷರ ಗಾತ್ರ

ಮೈಸೂರು: ‘ಸಾಮಾಜಿಕ ಸ್ಥಿತಿಗತಿ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿವೆ. ಇದಕ್ಕೆ ಅಪರಾಧ ಕ್ಷೇತ್ರವೂ ಹೊರತಾಗಿಲ್ಲ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಶುಕ್ರವಾರ 42ನೇ ತಂಡದ ಪ್ರೊಬೇಷನರಿ ಆರ್‌ಎಸ್‌ಐ/ಪಿಎಸ್‌ಐಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಅವರು, ‘ಅಪರಾಧದ ಸ್ವರೂಪ ಬದಲಾದಂತೆ ತರಬೇತಿ ನೀಡುವುದನ್ನು ಬದಲಿಸಲು ಗೃಹ ಇಲಾಖೆ ಮುಂದಾಗಿದೆ’ ಎಂದು ಹೇಳಿದರು.

‘ಆನ್‌ಸೀನ್‌ ಪೊಲೀಸಿಂಗ್ ನಮ್ಮಲ್ಲಿ ತುಂಬಾ ಕಡಿಮೆಯಿದೆ. ವಿದೇಶದಲ್ಲಿ ಇದು ಹೆಚ್ಚಿದೆ. ನಮ್ಮಲ್ಲೂ ಆನ್‌ಸೀನ್‌ ಪೊಲೀಸಿಂಗ್ ಜಾರಿಗಾಗಿ ತರಬೇತಿ ಹಂತದಲ್ಲೇ ಸುಧಾರಣೆ ಕಂಡುಕೊಳ್ಳುತ್ತಿದ್ದೇವೆ. ಇದಕ್ಕಾಗಿಯೇ ಜರ್ಮನಿ ಸೇರಿದಂತೆ ಇನ್ನಿತರ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಲ್ಲಿನ ತಂಡ ನಮ್ಮ ಪೊಲೀಸ್ ಅಕಾಡೆಮಿಗೂ ಭೇಟಿ ನೀಡಿದೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಪೊಲೀಸ್ ಅಧಿಕಾರಿಗಳಿಗೆ ಸಮಯ ಪ್ರಜ್ಞೆ, ಸ್ಥಿತ ಪ್ರಜ್ಞೆ ಎರಡೂ ಪ್ರಮುಖವಾದವು. ಇವೆರೆಡನ್ನು ಹೊಂದಿದ್ದರೆ ಎಂಥಹ ಸವಾಲನ್ನು ಸಹ ಎಲ್ಲ ಸಂದರ್ಭ ಮೆಟ್ಟಿ ನಿಲ್ಲಬಹುದು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿ ಹೊರಹೊಮ್ಮುವುದಕ್ಕಿಂತ, ಸಾಧಕರಾಗಿ ಹೊರಹೊಮ್ಮಿ’ ಎಂದು ಸಲಹೆ ನೀಡಿದರು.

‘ಕಳ್ಳರಿಗೆ, ಉಗ್ರರಿಗೆ ಕಟುವಾಗಿರಿ. ಜನರಿಗೆ ಮೃದುವಾಗಿದ್ದು ಜನಸ್ನೇಹಿಯಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ’ ಎಂದು ಇದೇ ಸಂದರ್ಭ ಗೃಹ ಸಚಿವರು ಕಿವಿಮಾತು ಹೇಳಿದರು.

ನಿರ್ಗಮಿತ ತಂಡದಲ್ಲಿ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಧಾರವಾಡ, ಹಾಸನ, ಕಲಬುರ್ಗಿ, ಕೋಲಾರ, ಮೈಸೂರು, ರಾಯಚೂರು, ಶಿವಮೊಗ್ಗ, ವಿಜಯಪುರ ಜಿಲ್ಲೆಯ ಪ್ರಶಿಕ್ಷಣಾರ್ಥಿಗಳಿದ್ದರು.

ಶಾಸಕ ಎಲ್‌.ನಾಗೇಂದ್ರ ಉಪಸ್ಥಿತರಿದ್ದರು. ವಿಪುಲ್‌ಕುಮಾರ್ ಸ್ವಾಗತಿಸುವ ಜತೆ ಅಕಾಡೆಮಿ ವರದಿ ವಾಚಿಸಿದರು. ಐಪಿಎಸ್ ಹಿರಿಯ ಅಧಿಕಾರಿಗಳಾದ ಪದಮ್‌ ಕುಮಾರ್ ಗರ್ಗ್‌, ರವಿ ಎಸ್. ಸಿ.ಬಿ.ರಿಷ್ಯಂತ್, ಕೆ.ಟಿ.ಬಾಲಕೃಷ್ಣ, ಅಕಾಡೆಮಿ ಪ್ರಾಂಶುಪಾಲರಾದ ಧರಣಿದೇವಿ ಮಾಲಗತ್ತಿ ಹಾಜರಿದ್ದರು. ಸುಧೀರ್‌ಕುಮಾರ್ ರೆಡ್ಡಿ ವಂದಿಸಿದರು.

ಬಹುಮಾನ–ಟ್ರೋಫಿ ಪಡೆದವರು
ಚಾಮರಾಜನಗರದ ಎಸ್‌.ಚರಣ್‌ ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಗೃಹ ಸಚಿವರಿಂದ ಮುಖ್ಯಮಂತ್ರಿ ಟ್ರೋಫಿ, ಡಿಜಿ ಮತ್ತು ಐಜಿಪಿ ಬೇಟನ್ ಪಡೆದರು. ಕೋಲಾರದ ಅರ್ಪಿತಾ ರೆಡ್ಡಿ ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿಯಾಗಿ ಟ್ರೋಫಿ ಪಡೆದರು.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಬಾನೆ ಸಿದ್ದಣ್ಣ ಉತ್ತಮ ರೈಫಲ್‌ ಫೈರಿಂಗ್‌, ಹುಕ್ಕೇರಿ ತಾಲ್ಲೂಕಿನ ಉಮಾಶ್ರೀ ಕಲಕುಟಗಿ ಬೆಸ್ಟ್‌ ಡೈರೆಕ್ಟರ್ಸ್‌ ಅಸೆಸ್‌ಮೆಂಟ್ ಕಪ್‌, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಂಜೀವ ಗಟ್ಟರಗಿ ಉತ್ತಮ ರಿವಾಲ್ವರ್ ಫೈರಿಂಗ್‌ ಟ್ರೋಫಿ ಪಡೆದುಕೊಂಡರು.

ದಾವಣಗೆರೆಯ ಮಂಜಣ್ಣ ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಟ್ರೋಫಿ ಪಡೆದರೆ, ಹಾಸನದ ಎಸ್.ರಘುರಾಜ್ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಜತೆಗೆ ಸರ್ವೋತ್ತಮ ಪ್ರಶಿಕ್ಷಣಾರ್ಥಿ ದ್ವಿತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT