ಡ್ರಗ್ ಮಾಫಿಯಾದ ಹಿಂದೆ ಯಾರು ಇದ್ದಾರೆ ಎಂಬುದು ಬಹಿರಂಗವಾಗಲಿ: ವಿಶ್ವನಾಥ್

ಮೈಸೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ ಮಾಫಿಯಾದ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಬಹಿರಂಗವಾಗಬೇಕು. ಇದೊಂದು ಗಂಭೀರ ವಿಚಾರವಾಗಿದ್ದು, ಮಡಿವಂತಿಕೆ ಬೇಡ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
‘ಡ್ರಗ್ಸ್ ವಿಚಾರದಲ್ಲಿ ಯಾವುದನ್ನೂ ಮುಚ್ಚಿಡಬಾರದು. ನಮ್ಮ ಮಕ್ಕಳು, ನಮ್ಮ ಜಾತಿ, ನಮ್ಮ ಪಕ್ಷ ಎಂದು ತಪ್ಪಿತಸ್ಥರ ರಕ್ಷಣೆಗೆ ಮುಂದಾಗಬಾರದು. ಶಾಸಕರಾದ ಹ್ಯಾರಿಸ್, ಕಳಕಪ್ಪ ಬಂಡಿ ಅವರ ಮಕ್ಕಳ ಹೆಸರೂ ಡ್ರಗ್ಸ್ ಜತೆ ತಳಕುಹಾಕಿಕೊಂಡಿತ್ತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜ ವಿರೋಧಿ ಚಟುವಟಿಕೆಗಳು ಎಲ್ಲೆಲ್ಲಾ ನಡೆಯುತ್ತಿದೆ ಎಂಬುದು ಪೊಲೀಸರಿಗೆ ಗೊತ್ತಿರುವ ವಿಷಯ. ಆದರೂ ಡ್ರಗ್ಸ್ ಜಾಲದ ಬಗ್ಗೆ ಗೊತ್ತಿಲ್ಲದ ಹಾಗೆ ನಟಿಸುತ್ತಿದ್ದಾರೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ. ಪೊಲೀಸ್ ಇಲಾಖೆ ಸಮಾಜದ ಮುಂದೆ ತಲೆಬಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪಂಜಾಬ್‌ಗೆ ನಿಯೋಗ ತೆರಳಲಿ: ಮಾನಸಿಕ ತಜ್ಞರು, ಪೊಲೀಸರು, ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಂತ್ರಿಗಳನ್ನು ಒಳಗೊಂಡ ತಂಡವನ್ನು ರಾಜ್ಯ ಸರ್ಕಾರವು ಪಂಜಾಬ್‌ಗೆ ಕಳುಹಿಸಲಿ. ಡ್ರಗ್ಸ್ ದಂಧೆಯ ನಿಯಂತ್ರಣಕ್ಕೆ ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
‘ಡ್ರಗ್ ಮಾಫಿಯಾ ನನ್ನ ಸರ್ಕಾರವನ್ನು ಬೀಳಿಸಿತ್ತು’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವನಾಥ್ ನಿರಾಕರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.