ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಹೀನರಿಂದ ಪಠ್ಯ ವಾಪಸ್ ಪ್ರಹಸನ: ಪ್ರತಾಪ ಸಿಂಹ

Last Updated 1 ಜೂನ್ 2022, 5:45 IST
ಅಕ್ಷರ ಗಾತ್ರ

ಮೈಸೂರು: 'ಪಠ್ಯ ಕೈಬಿಡುವಂತೆ ಪತ್ರ ಬರೆಯುತ್ತಿರುವವರು ಹಾಗೂ ಆ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವವರು ವಿಚಾರಹೀನರು' ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

ಇಲ್ಲಿ‌ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‌'ತರ್ಕದಲ್ಲಿ ಅವರು ಗೆಲ್ಲಲು ಆಗಲಿಲ್ಲ. ಹೀಗಾಗಿ ಹೊಸ ತರಕಾರರು ಶುರು ಮಾಡಿದ್ದಾರೆ. ವಿವಾದ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ' ಎಂದು ದೂರಿದರು.

'ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಅವರ 8 ಪಠ್ಯಗಳಲ್ಲಿ ಒಂದನ್ನು ಬಿಟ್ಟಿದ್ದರು. ನಾವು ಈಗ ಕುವೆಂಪು ಅವರ 10 ಪಠ್ಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಿದ್ದೇವೆ' ಎಂದು ಸಮರ್ಥಿಸಿಕೊಂಡರು.

'ಸಿದ್ದರಾಮಯ್ಯ ಅವರ ಆಡಳಿತ ವ್ಯಂಗ್ಯ ಮಾಡಲು 2017ರಲ್ಲಿ ಯಾರೋ ಬರೆದ ಗೀತೆಯನ್ನು ಚಕ್ರತೀರ್ಥ ವಾಟ್ಸ್ ಆ್ಯಪಲ್ಲಿ ಫಾರ್ವರ್ಡ್ ಮಾಡಿದ್ದಾರೆ. ಆ ಕೇಸಲ್ಲಿ 'ಬಿ' ವರದಿ ಹಾಕಲಾಗಿದೆ. ಈಗ ಅದನ್ನು ಮುಂದಿಟ್ಟುಕೊಂಡು ವಿವಾದ ಮಾಡಲಾಗುತ್ತಿದೆ' ಎಂದು ಹೇಳಿದರು.

'ಕಾಂಗ್ರೆಸ್ ಈಗ ನೆಲ ಕಚ್ಚಿದೆ. ಕಾಂಗ್ರೆಸ್‌ನಿಂದ ಉಪಕೃತರಾದ ಸಾಹಿತಿಗಳು ಪಠ್ಯ ಕೈಬಿಡುವಂತೆ ಪತ್ರ ಬರೆದು ತಗಾದೆ ತೆಗೆದಿದ್ದಾರೆ. ಕಮಲಾ ಹಂಪನಾ, ಬರಗೂರು ರಾಮಚಂದ್ರಪ್ಪ ಆದಿಯಾಗಿ ಯಾರೂ 10 ವರ್ಷಗಳಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೃತಿ ರಚನೆ ಮಾಡಿದ್ದಾರೆಯೇ? ಇಲ್ಲ. ಹೀಗಾಗಿ ಹೊಸ ಪಠ್ಯಗಳನ್ನು ‌ಸೇರಿಸಲಾಗಿದೆ' ಎಂದು‌ ಸಮರ್ಥಿಸಿಕೊಂಡರು.

'ಸಾಹಿತಿಗಳ ಪಠ್ಯ ವಾಪಸ್ ಚಳವಳಿ ಟೂಲ್ ಕಿಟ್‌ನ ಒಂದು ಭಾಗವಾಗಿದೆ. ದೇವನೂರ ಮಹಾದೇವ ಸೇರಿದಂತೆ ಹಲವರ ಪಠ್ಯವನ್ನು 10 - 12 ವರ್ಷದಿಂದಲೂ ಮಕ್ಕಳು ಓದಿದ್ದಾರೆ.‌ ಕೆಲವರ ಪಠ್ಯ ಕೈ ಬಿಟ್ಟಿದ್ದೇವೆ.

ಸರಜೂ‌ ಕಾಟ್ಕರ್ ಸೇರಿದಂತೆ ಹಲವರು ತಮ್ಮ ಪಠ್ಯ ಕೈ ಬಿಟ್ಟಿದ್ದರೂ ಪಠ್ಯ ವಾಪಸ್ ಪಡೆದಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಈಗಾಗಲೇ ‌ಪಠ್ಯದಿಂದ ತೆಗೆಯಲಾಗಿದೆ. ಹೀಗಿರುವಾಗ ಪತ್ರ ಬರೆಯುವುದರಲ್ಲಿ ಅರ್ಥವಿದೆಯಾ?' ಎಂದು ಕೇಳಿದರು.

'ಸಾಹಿತಿ ಹಂಪನಾ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಪತ್ನಿ ಕಮಲಾ ಹಂಪನಾ ಇನ್ನೂ ಆ ಸಮಿತಿ ಸದಸ್ಯ ಸ್ಥಾನದಲ್ಲೇ‌ ಇದ್ದಾರೆ. ಅದರ ಅರ್ಥ ಮನೆಯಲ್ಲೆ ಸಹಮತ ಇಲ್ಲ ಎನ್ನುವುದೇ ಆಗಿದೆ' ಎಂದು ಟೀಕಿಸಿದರು.

'ಕೆಲವು ಸಾಹಿತಿಗಳು ಕಾಂಗ್ರೆಸ್‌ಗೆ ಪರೋಕ್ಷವಾಗಿ ‌ಸಹಕಾರ- ಬೆಂಬಲ‌ ನೀಡುತ್ತಿದ್ದಾರೆ. ಅದಕ್ಕೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT