ಭಾನುವಾರ, ಆಗಸ್ಟ್ 1, 2021
27 °C

ಸಿದ್ದರಾಮಯ್ಯ ತಮ್ಮನ್ನು ಪ್ರಧಾನಿ ಮಟ್ಟಕ್ಕೆ ಏರಿಸಿಕೊಳ್ಳುವುದು ಬೇಡ: ಪ್ರತಾಪಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಪ್ರಧಾನಿ ಮಟ್ಟಕ್ಕೆ ಏರಿಸಿಕೊಳ್ಳಬಾರದು. ತಮ್ಮ ಬೌಂಡರಿಯನ್ನು ರಾಜ್ಯಕ್ಕೆ ಸೀಮಿತಗೊಳಿಸಿಕೊಳ್ಳುವುದು ಉತ್ತಮ’ ಎಂದು ಸಂಸದ ಪ್ರತಾಪಸಿಂಹ ಗುರುವಾರ ಇಲ್ಲಿ ವ್ಯಂಗ್ಯವಾಡಿದರು.

‘ಅವರನ್ನು ಪ್ರಶ್ನಿಸಿದ ಕೂಡಲೇ ಪ್ರಧಾನಿಯಿಂದ ಲೆಕ್ಕ ಕೇಳುತ್ತಾರೆ. ನಮ್ಮನ್ನು ಕೇಳಿದರೆ ನಾವೇ ಕೊಡುತ್ತೇವೆ. ಲೆಕ್ಕಪತ್ರ ತಪಾಸಣೆಗಾಗಿ ಸ್ವತಃ ಮುಖ್ಯಮಂತ್ರಿಯೇ ನೀಡಿರುವ ಆಹ್ವಾನ ಸ್ವೀಕರಿಸುವುದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ’ ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರು ಪಕ್ಷದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣವನ್ನು ಸಿದ್ದರಾಮಯ್ಯ ಲಕ್ಷ್ಯಗೊಟ್ಟು ಕೇಳಿ, ಅದಕ್ಕೆ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವುದು ಖುಷಿ ತಂದಿದೆ. ಸಂತೋಷ್ ಅವರ ಭಾಷಣವನ್ನು ಅವರು ಅಷ್ಟು ಗಮನವಿಟ್ಟು ಕೇಳಿದ್ದಕ್ಕೆ ಧನ್ಯವಾದ’ ಎಂದರು.

‘ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರು, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಅಂತಹ ಕೆಲಸ ಕರ್ನಾಟಕದಲ್ಲೂ ಆಗಬೇಕಿತ್ತು ಎಂದು ಸಿದ್ದರಾಮಯ್ಯ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡು ಸಂತೋಷ್‌ ಹೇಳಿದ್ದಾರೆಯಷ್ಟೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಈ ರಾಜ್ಯ ಆಳಿದವರು. ಅವರಷ್ಟೇ ಅಲ್ಲ; ವಿರೋಧ ಪಕ್ಷದ ಎಲ್ಲ ಹಿರಿಯರನ್ನು ಗೌರವದಿಂದ ಕಾಣುತ್ತೇನೆ. ಕಾಲು ಮುಟ್ಟಿ ನಮಸ್ಕರಿಸಿತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು