ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣವೇ ಇತಿಹಾಸವೆಂದು ಬಿಂಬಿಸುತ್ತಿರುವ ಸರ್ಕಾರ: ಪ್ರಿಯಾಂಕ್ ಖರ್ಗೆ ಟೀಕೆ

Last Updated 25 ಸೆಪ್ಟೆಂಬರ್ 2022, 11:30 IST
ಅಕ್ಷರ ಗಾತ್ರ

ಮೈಸೂರು: ‘ಸರ್ಕಾರವು ಪುರಾಣವನ್ನೇ ಇತಿಹಾಸ ಎಂದು ಬಿಂಬಿಸುತ್ತಿದೆ. ಅದೇ ಸತ್ಯ ಎಂದು ನಂಬಿಸುತ್ತಿದೆ. ವ್ಯತ್ಯಾಸ ತಿಳಿಯದೇ ಗೊಂದಲವನ್ನುಂಟು ಮಾಡುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘವು ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಅಂಗವಾಗಿ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ಎಂಜಿನಿಯರ್‌ಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇನ್ನೂ ಪುರಾಣವನ್ನು ನಂಬಿ ಕುಳಿತುಕೊಳ್ಳಬಾರದು. ಮಹಾರಾಭಾರತ, ರಾಮಾಯಾಣ ಮತ್ತು ಶಾಸ್ತ್ರ ಮೊದಲಾದವುಗಳನ್ನು ಓದಿ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು; ಜೊತೆಗೆ ಪ್ರಶ್ನಿಸಲೂ ಬೇಕು’ ಎಂದು ಸಲಹೆ ನೀಡಿದರು.

‘ಯುವಕರು ಕೇಸರಿ ಶಾಲು ಮತ್ತು ಸಾಮಾಜಿಕ ಜಾಲತಾಣದಿಂದ ದೂರವಿರಬೇಕು. ಶಿಕ್ಷಣ ಪಡೆದವರು ಉದ್ಧಾರವಾಗಿದ್ದಾರೆಯೇ ಹೊರತು ಕೇಸರಿ ಶಾಲು ಹಾಕಿಕೊಂಡವರಲ್ಲ. ಗೋರಕ್ಷಣೆ ಮಾಡುವುದಾಗಿ ಓಡಾಡಿದವರಲ್ಲ’ ಎಂದು ತಿಳಿಸಿದರು.

‘ಶಿಕ್ಷಣದ ಮೂಲಕವಷ್ಟೇ ನಾವು ಸದೃಢರಾಗಲು ಸಾಧ್ಯ ಎಂಬುದನ್ನು ಅರಿಯಬೇಕು’ ಎಂದು ಕಿವಿಮಾತು ಹೇಳಿದರು. ‘ಶಿಕ್ಷಣದ ಮೂಲಕ ಪ್ರಬುದ್ಧ ಭಾರತ ನಿರ್ಮಿಸಬೇಕು’ ಎಂದರು.

‘ಜ್ಞಾನಾಧಾರಿತ ಸಮಾಜ ನಿರ್ಮಿಸಿವುದು ಶಿಕ್ಷಣ ಮಾತ್ರ. ಆಗ ಭಾರತ ಮೊದಲ ಸ್ಥಾನದಲ್ಲಿರುತ್ತದೆ. ಶಿಕ್ಷಣದ ಜೊತೆಗೆ ವೈಚಾರಿಕ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ದಾಸರಾಗದೇ ಅದರಲ್ಲಿ ಬಂದಿರುವುದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರರಾದ ಬೆಟ್ಟಯ್ಯಕೋಟೆ, ಚಿಕ್ಕಜವರಯ್ಯ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ನಿವೃತ್ತ ಎಂಜಿನಿಯರ್‌ಗಳಾದ ಟಿ.ಆರ್.ಶಿವರಾಮು, ರಾಜಶೇಖರ್ ಎಡಹಳ್ಳಿ, ಆರ್.ಕೆ.ರಾಜು, ರಾಮಚಂದ್ರ, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಭಂತೇಜಿ, ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸ್ದಿದರು. ಶಾಸಕ ಅಶ್ವಿನ್ ಕುಮಾರ್, ಮುಖಂಡ ಪುರುಷೋತ್ತಮ್, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇದ್ದರು.

ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಸಿದ್ದರಾಜು ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT