ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕೊಡದೆ, ಕೊಟ್ಟೆ ಎಂದ ಸರ್ಕಾರ! 2 ಮಳೆಗಾಲ ಮುಗಿದರೂ ಸಂತ್ರಸ್ತರ ಕಷ್ಟ ತಪ್ಪಿಲ್ಲ

Last Updated 29 ಜುಲೈ 2021, 20:46 IST
ಅಕ್ಷರ ಗಾತ್ರ

ಮೈಸೂರು: ‘ಎರಡು ಮಳೆಗಾಲವನ್ನು ಮಳೆಯಲ್ಲೇ ಕಳೆದಿದ್ದೇವೆ. ಆದರೂ ಮನೆ ಕೊಟ್ಟಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡಿ ಜೈಲಿನಲ್ಲಿರೋದೇ ಒಳ್ಳೆಯದು ಎನಿಸುತ್ತಿದೆ’

–2019ರ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್‌ನ 42 ಸಂತ್ರಸ್ತರ ಅಳಲು ಇದು. ಅವರು ಕಬಿನಿ ಜಲಾಶಯ ನಿರ್ಮಿಸುವ ಸಲುವಾಗಿ ಬಂದು ನೆಲೆಗೊಂಡವರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟಗಳನ್ನು ತೆರೆದಿಟ್ಟ ಸಂತ್ರಸ್ತೆ ಚೆಲುವಿ, ‘ಸಂತ್ರಸ್ತರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಎಲ್ಲರೂ ನೆಮ್ಮದಿಯಾಗಿದ್ದಾರೆ ಎಂದು ಸರ್ಕಾರ ಜುಲೈ 26ರಂದು ಜಾಹೀರಾತು ಪ್ರಕಟಿಸಿದೆ. ಆದರೆ, ನಾವು ಮಾತ್ರ ಇಂದೋ ನಾಳೆಯೋ ಕುಸಿಯಲಿರುವ ಮನೆಯಲ್ಲೇ ಜೀವಭಯದಲ್ಲಿ ವಾಸಿಸುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಹೆಗ್ಗಣ, ಹಾವು, ಚೇಳು, ಕ್ರಿಮಿಕೀಟಗಳ ನಡುವೆ ಬದುಕು ನಡೆದಿದ. ಮಳೆಗಾಲದಲ್ಲಿ ಮನೆ ಸುತ್ತ ನೀರು ತುಂಬಿಕೊಂಡು ಆರೋಗ್ಯ ಕೆಡುತ್ತಿದೆ. ಹೊಸ ಮನೆಯ ಭರವಸೆ ನೀಡಿದ ಸರ್ಕಾರ ಮಾತ್ರ 2 ವರ್ಷವಾದರೂ ತಳಪಾಯವನ್ನೂ ಹಾಕಿಲ್ಲ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ, ಮನೆಗಳ ದುರಸ್ತಿಗೆಂದು ₹ 50 ಸಾವಿರ ಚೆಕ್‌ ನೀಡಿ, ಮಾಂಸ, ಮದ್ಯ ಸೇವಿಸಿ ಹಣ ಕಳೆದುಬಿಡುತ್ತೀರಿ ಎಂದು ವಾಪಸ್ ಪಡೆದುಕೊಂಡರು. ಹೊಸ ಮನೆ ನಿರ್ಮಿಸಿಕೊಡಲೂ ಇಲ್ಲ’ ಎಂದು ಕಣ್ಣಿರು ಹಾಕಿದರು.

‌’42 ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಿಕೊಡುವ ಸಲುವಾಗಿ ಸರ್ಕಾರ ಕಾವೇರಿ ನೀರಾವರಿ ನಿಗಮದ ಜಮೀನನ್ನು ಗುರುತಿಸಿದ್ದರೂ ಕಂದಾಯ ಇಲಾಖೆಗೆ ಹಸ್ತಾಂತರವಾಗಿಲ್ಲ. ತಿಂಗಳೊಳಗೆ ಮನೆ ನಿರ್ಮಿಸಿಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ತಿಳಿಸಿದರು.

ನೀರು ಜಿನುಗುತ್ತಿರುವ ಗೋಡೆಗಳು ನಮ್ಮ ಮೇಲೆ ಬಿದ್ದು ನಾವು ಸಾಯಬಹುದು. ನಂತರವಾದರೂ ಸರ್ಕಾರ ಕಣ್ತೆರೆಯಬಹುದು

–ಪಾಪಮ್ಮ, ಸಂತ್ರಸ್ತೆ

***

ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 2.16 ಎಕರೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಬೇಕಿದೆ. ನೀರಾವರಿ ಇಲಾಖೆಯ ಉನ್ನತಾಧಿಕಾರ ಸಮಿತಿ ನಿರ್ಧಾರ ಕೈಗೊಳ್ಳಬೇಕು

–ಚೆಲುವರಾಜು, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT