ಶನಿವಾರ, ಜೂಲೈ 11, 2020
28 °C
ಬೈಕ್‌ ಮೇಲೆ ಕುಳಿತು ಬಾರ್‌ಕೋಲ್‌ ಹಿಡಿದ ರೈತರು, ತಳ್ಳುವ ಗಾಡಿಯ ಮೇಲೆ ಕೂತ ಕಾಂಗ್ರೆಸ್ ನಾಯಕರು

ಮೈಸೂರು ನಗರದಲ್ಲಿ ಹಲವೆಡೆ ಪ್ರತ್ಯೇಕ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಸೋಮವಾರ ಹಲವೆಡೆ ಪ್ರತ್ಯೇಕ ಪ್ರತಿಭಟನೆಗಳು ಜರುಗಿದವು. ಒಂದೆಡೆ ರೈತರು ಬೈಕ್ ಮೇಲೆ ಕುಳಿತು ಬಾರ್‌ಕೋಲ್ ಹಿಡಿದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರೆ, ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ತಳ್ಳುವ ಗಾಡಿಯ ಮೇಲೆ ಕುಳಿತು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ರೈತರ ಮತ್ತೊಂದು ಗುಂಪು ಗ್ರಾಮ ಪಂಚಾಯಿತಿಗಳ ಮುಂದೆ ಕುಳಿತು ಧರಣಿ ನಡೆಸಿತು.

ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ಬಾರ್‌ಕೋಲ್‌ ಹಿಡಿದ ರೈತರು ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ನುಗ್ಗಲು ಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಆದಾಗ್ಯೂ, ಕೆಲವು ರೈತರು ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಕಚೇರಿಗೆ ನುಗ್ಗಲು ಇನ್ನಿಲ್ಲದ ಸಾಹಸ ನಡೆಸಿದರು. ಈ ವೇಳೆ ಪ್ರತಿಭಟನಾಕಾರರಿಗೂ, ಪೊಲೀಸರಿಗೂ ಜಟಾಪಟಿ ನಡೆಯಿತು.

ಇದಕ್ಕೂ ಮುನ್ನ ನೂರಾರು ಸಂಖ್ಯೆಯಲ್ಲಿ ರೈತರು ನಗರದ ಗನ್‌ಹೌಸ್‌ ವೃತ್ತದಿಂದ ಕೈಯಲ್ಲಿ ಬಾರ್‌ಕೋಲ್‌ ಹಿಡಿದು, ಬೈಕ್ ಮೇಲೆ ಜಾಥಾ ಹೊರಟರು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‌ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡ, ರೈತರ ಹೋರಾಟಕ್ಕೆ ಜಯವಾಗಲಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ರೈತರಿಗೆ ಮರಣ ಶಾಸನ ಮೊದಲಾದ ಭಿತ್ತಿಪತ್ರಗಳನ್ನು ಹಿಡಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ನೇರವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಧಾವಿಸಿದ ರೈತರು ಎಲ್ಲರನ್ನೂ ಒಳಗೆ ಬಿಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ರೈತರು ತೆರಳಿದರು.

ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಕುರುಬೂರ್ ಶಾಂತಕುಮಾರ್, ಸಾಮೂಹಿಕ ನಾಯಕತ್ವ ರೈತ ಸಂಘದ ವಿದ್ಯಾಸಾಗರ್ ರಾಮೇಗೌಡ, ಅಖಂಡ ಕರ್ನಾಟಕ ರೈತ ಸಂಘದ ಸುಧೀರ್‌ಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್, ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್ ಹಾಗೂ ಇತರರು ಇದ್ದರು.

ತಳ್ಳುವ ಗಾಡಿಯಲ್ಲಿ ಹೊರಟ ಕಾಂಗ್ರೆಸ್ ಮುಖಂಡರು

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ (ಜಿಲ್ಲಾ) ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಳ್ಳುವ ಗಾಡಿಯಲ್ಲಿ ಕುಳಿತು ಕೊಳ್ಳುವ ಮೂಲಕ ವಿನೂತನವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಅವರು ತಳ್ಳುವ ಗಾಡಿಯಲ್ಲಿ ಕುಳಿತರು. ಇವರನ್ನು ಇತರೆ ಕಾರ್ಯಕರ್ತರು ತಳ್ಳಿಕೊಂಡು ಇಂದಿರಾ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬಂದರು. ನಂತರ, ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕಾರು ಮಾರಾಟಕ್ಕಿದೆ ಎಂದು ಫಲಕ ಹಾಕಿಕೊಂಡ ಕಾರನ್ನೂ ಕಾರ್ಯಕರ್ತರು ತಳ್ಳಿಕೊಂಡೇ ಬಂದದ್ದು ವಿಶೇಷ ಎನಿಸಿತ್ತು.

ಈ ವೇಳೆ ಮಾತನಾಡಿದ ಮುಖಂಡ ಎಂ.ಕೆ.ಸೋಮಶೇಖರ್, ‘ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಅತಿಯಾಗಿ ಹೆಚ್ಚಿಸಿದೆ. ಇದರಿಂದ ಬಡವರ ಬದುಕು ತೀರಾ ಅಸಹನೀಯವಾಗಿದೆ. ಕೂಡಲೇ ಇಂಧನ ಬೆಲೆಯನ್ನು ಇಳಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಇಂದಿರಾ ಕಾಂಗ್ರೆಸ್ ಭವನದ ಮುಂಭಾಗ ಕುಳಿತ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಮಹಿಳಾ ನಗರ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಘಟಕದ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ, ಗ್ರಾಮಾಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಯಕ ಹಾಗೂ ಇತರರು ಇದ್ದರು.

ಎಂ.ಕೆ.ಸೋಮಶೇಖರ್ ಅವರು ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸೈಕಲ್ ಜಾಥಾ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಶ್ರೀನಾಥಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಮನೋಜ್, ಗುಣಶೇಖರ್, ನಾಸೀರ್, ವೀಣಾ, ಸಮೀರ ಇದ್ದರು.

ಗ್ರಾಮ ಪಂಚಾಯಿತಿಗಳ ಮುಂದೆ ರೈತರ ಆಕ್ರೋಶ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲೆಯ ಹಲವು ಗ್ರಾಮಗಳ ಪಂಚಾಯಿತಿ ಕಚೇರಿ ಮುಂದೆ ಕುಳಿತು ಸೋಮವಾರ ಧರಣಿ ನಡೆಸಿದರು.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಒತ್ತಾಯಿಸಿದ ಅವರು, ಎಪಿಎಂಸಿ ಕಾಯ್ದೆಯ ತಿದ್ದುಪಡಿಗಾಗಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾವ ಬೇಡವೇ ಬೇಡ ಎಂದು ಒಕ್ಕೊರಲಿನಿಂದ ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ‌ಶೆಟ್ಟಳ್ಳಿ ಚಂದ್ರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು