ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲು ಮಳೆಯಲ್ಲಿ ಮಿಂದೆದ್ದ ಮೈಸೂರು

ಬೆಳೆಗಳಿಗೆ ಜೀವದಾನ, ಸಿಡಿಲಿನಿಂದ ಮೂವರಿಗೆ ಗಾಯ, ಕಗ್ಗತ್ತಲಲ್ಲಿ ನಗರಿ
Last Updated 23 ಮೇ 2019, 19:54 IST
ಅಕ್ಷರ ಗಾತ್ರ

ಮೈಸೂರು: ಅಪರೂಪದ ಆಲಿಕಲ್ಲು ಮಳೆಯಲ್ಲಿ ಮೈಸೂರು ನಗರ ಗುರುವಾರ ಸಂಜೆ ಮಿಂದೆದ್ದಿತು. ಇಡೀ ನಗರವೇ ಮಹಾಮಜ್ಜನ ಕಂಡಂತಹ ಸ್ಥಿತಿಯನ್ನು ಅನುಭವಿಸಿತು. ಬಿಸಿಲಿನ ಬೇಗೆಯನ್ನು ತಣಿಸಿ, ತಂಪು ಮೂಡುವಂತೆ ಮಾಡಿತು.

ಪಟಪಟನೇ ಬೀಳುತ್ತಿದ್ದ ಆಲಿಕಲ್ಲುಗಳನ್ನು ಕಂಡು ಮಕ್ಕಳು, ಯುವಕ– ಯುವತಿಯರು ಸಂಭ್ರಮಿಸಿದರು. ಮನೆಯ ಅಂಗಳದಲ್ಲಿ ಬಿದ್ದ ಆಲಿಕಲ್ಲುಗಳನ್ನು ಹಾಯ್ದುಕೊಂಡು ಪುಳಕವನ್ನು ಅನುಭವಿಸಿದರು. ಇತ್ತೀಚಿನ ವರ್ಷಗಳಲ್ಲಿ ಇಂತಹ ಆಲಿಕಲ್ಲು ಮಳೆಯನ್ನು ನಗರ ಕಂಡಿರಲಿಲ್ಲ.

ತಾಲ್ಲೂಕಿನಾದ್ಯಂತ ಸುರಿದ ಮಳೆಯು ಬೇಸಿಗೆ ಬೆಳೆಗಳಿಗೆ ಜೀವದಾನ ನೀಡಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಬೆಕ್ಕರೆ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನವೀನ್ (45) ಇವರ ಪುತ್ರ ರಂಜನ್ (20) ಹಾಗೂ ಪ್ರೇಮಾ (40) ಅವರಿಗೆ ಸಿಡಿಲಿನ ಆಘಾತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಮೈಸೂರು ನಗರದ ಚನ್ನಗಿರಿಕೊಪ್ಪಲುವಿನಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

ಉಳಿದಂತೆ, ಜಿಲ್ಲೆಯ ಎಚ್.ಡಿ.ಕೋಟೆ, ಹಂಪಾಪುರ, ನಂಜನಗೂಡು, ಪಿರಿಯಾಪಟ್ಟಣ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದೆ.‌

ಅತಿ ಹೆಚ್ಚು ಬಿರುಗಾಳಿ:

ಈ ಬಾರಿ ವರ್ಷದಲ್ಲೇ ಅತ್ಯಧಿಕ ವೇಗದಲ್ಲಿ ಬಿರುಗಾಳಿ ಬೀಸಿದೆ. ‘ಸಾಮಾನ್ಯವಾಗಿ ಒಂದು ಸೆಕೆಂಡಿಗೆ 1ರಿಂದ 2 ಮೀಟರ್‌ನಷ್ಟು ಇರುವ ಗಾಳಿಯ ವೇಗವು ಗುರುವಾರ ಒಂದು ಸೆಕೆಂಡಿಗೆ 7.7 ಮೀಟರ್‌ನಷ್ಟು ಇತ್ತು’ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಗಾಳಿಯ ವೇಗದಿಂದ ನಾಗರಿಕರು ತಲ್ಲಣಿಸಿದರು. ವಾಹನ ಸವಾರರು ಅಕ್ಷರಶಃ ಪರದಾಡಿದರು. ರಕ್ಷಣೆಗೆ ಮರದ ಕೆಳಗೆ ನಿಲ್ಲಲೂ ಆಗದೇ, ಆಲಿಕಲ್ಲು ಮಳೆಯಲ್ಲಿ ಮುಂದೆ ಹೋಗಲೂ ಆಗದೇ ಪರಿತಪಿಸಿದರು.

ಎಲ್ಲೆಲ್ಲಿ ಮರಗಳು ಧರೆಗೆ?

ವರ್ಷದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ಧರೆಗುರುಳಿವೆ. ದೊಡ್ಡಕೆರೆ ಮೈದಾನ, ಶಾಂತಲಾ ಸಿನಿಮಾ ಮಂದಿರ ಸಮೀಪ, ಗಾಣಿಗರ ಬೀದಿ, ಅವಿಲಾ ಕಾನ್ವೆಂಟ್ ಹತ್ತಿರ, ನ್ಯೂ ಸಯ್ಯಾಜಿರಾವ್ ರಸ್ತೆಯ ಅನಘ ಆಸ್ಪತ್ರೆ ಬಳಿ, ಶಾರದಾದೇವಿನಗರ, ಅಪೊಲೊ ಆಸ್ಪತ್ರೆ ಬಳಿ, ರಾಮಕೃಷ್ಣನಗರ, ಕುವೆಂಪುನಗರ, ಸರಸ್ವತಿಪುರಂನ ಬೇಕ್‌ಪಾಯಿಂಟ್, ಜೆ.ಪಿ.ನಗರದ ‘ಇ’ ಬ್ಲಾಕ್, ಚಾಮುಂಡಿಪುರಂನ ಗೀತಾ ರಸ್ತೆ, ಕೃಷ್ಣಮೂರ್ತಿಪುರಂನ 3ನೇ ಅಡ್ಡರಸ್ತೆ, ರಾಮಾನುಜರಸ್ತೆ, ಕುವೆಂಪುನಗರದ ಕಾರ್ಪೋರೇಷನ್ ಬ್ಯಾಂಕ್ ಮುಂದೆ, ರಾಘವೇಂದ್ರ ಕಲ್ಯಾಣ ಮಂಟಪದ ಬಳಿ ಮರಗಳು ಹಾಗೂ ಮರಗಳ ಕೊಂಬೆಗಳು ಮುರಿದು ಬಿದ್ದಿವೆ.

ಪಾಲಿಕೆಯ ರಕ್ಷಣಾ ಪಡೆ ‘ಅಭಯ್’ ಇಲ್ಲೆಲ್ಲ ತೆರವುಗೊಳಿಸುವ ಕಾಯಕದಲ್ಲಿ ತಡರಾತ್ರಿಯವರೆಗೂ ನಿರತವಾಗಿತ್ತು.

ನೀರು ನುಗ್ಗಿದ್ದು ಎಲ್ಲಿ?

ಗೌರಿಶಂಕರನಗರ, ವಿಜಯನಗರದ 3ನೇ ಹಂತ, ವಿದ್ಯಾರಣ್ಯಪುರಂನ ಸ್ಯೂಯೇಜ್‌ಫಾರಂ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT