ಗುರುವಾರ , ನವೆಂಬರ್ 21, 2019
20 °C
40 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟ, ಬನ್ನಮ್ಮ ಕೆರೆ ಕೋಡಿ

ಹುಣಸೂರು: ಭಾರಿ ಮಳೆ, 26 ಮನೆ ನೆಲಸಮ, ಅಪಾರ ಹಾನಿ

Published:
Updated:

ಹುಣಸೂರು: ತಾಲ್ಲೂಕಿನಾದ್ಯಂತ ಶುಕ್ರವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ಹರಿದಿವೆ. ಬಿಳಿಕರೆ, ಬನ್ನಿಕುಪ್ಪೆ, ಧರ್ಮಾಪುರ, ಆಸ್ಪತ್ರೆಕಾವಲ್ ಗ್ರಾಮದ ಭಾಗದಲ್ಲಿ ಸುರಿದ ಮಳೆಗೆ 26 ಮನೆಗಳು ನೆಲಸಮವಾಗಿದ್ದು, 40 ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ.

ಬಿಳಿಕೆರೆ ಹೋಬಳಿ ಹಾಗೂ ಕಸಬಾ ಹೋಬಳಿಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದೆ. ಬನ್ನಿಕುಪ್ಪೆ ಗ್ರಾಮದ ಬನ್ನಮ್ಮ ಕೆರೆ ತುಂಬಿ ಕೋಡಿ ಬಿದ್ದಿದೆ. ಕುಡಿಯುವ ನೀರು ಪೂರೈಸುವ ಮೂರು ಕೊಳವೆಬಾವಿಗಳು ಜಲಾವೃತವಾಗಿದ್ದು, ನೀರಿಗೆ ಸಮಸ್ಯೆ ಎದುರಾಗಿದೆ. ರೈತರು ಬೆಳೆದ ಶುಂಠಿ, ಮೆಣಸು, ರಾಗಿ, ಜೋಳ ನೀರು ಪಾಲಾಗಿದೆ.

ಬಿಳಿಕೆರೆ ಹೋಬಳಿ ಭಾಗದ ಬೆಂಕಿಪುರ ಕೆರೆ, ಹೊಸಪುರ ಕೆರೆ, ದೈತ್ಯನಕೆರೆ ತುಂಬಿವೆ. ದೈತ್ಯನ ಕೆರೆ ಕೋಡಿ ಬಿದ್ದು ತಳಭಾಗದ ರೈತರ ಜಮೀನಲ್ಲಿ ಬೆಳೆದಿದ್ದ ಫಸಲು ನೀರಿನಲ್ಲಿ ಕೊಚ್ಚಿಹೋಗಿದೆ.

ಬನ್ನಿಕುಪ್ಪೆ ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ್ ತಿಳಿಸಿದ್ದಾರೆ.

ಬನ್ನಿಕುಪ್ಪೆ ಗ್ರಾಮದ ಮಹದೇವ್ ಮನೆ ಸಂಪೂರ್ಣ ಜಲಾವೃತವಾಗಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ 1,200 ಕೆ.ಜಿ. ತಂಬಾಕು ನೀರಿನಲ್ಲಿ ತೊಯ್ದುಹೋಗಿದೆ. ಇದರಿಂದ ₹3 ಲಕ್ಷ ನಷ್ಟವಾಗಿದೆ.

ಬೆಂಕಿಪುರ ಕೆರೆ ತುಂಬಿದ್ದು, ಕಂಗೊಳಿಸುತ್ತಿದೆ. ಉತ್ತಮ ಮಳೆ ಯಾಗಿರುವುದರಿಂದ ದಶಕದ ಬಳಿಕ ಕೆರೆ ತುಂಬಿದೆ ಎಂದು ಧರ್ಮಾಪುರದ ನಿವಾಸಿ ಮಹದೇವ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಪುಷ್ಪಾ ಅಮರನಾಥ್ ಮಳೆ ಹಾನಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಹುಣಸೂರು ನಗರದ ಮಂಜುನಾಥ ಬಡಾವಣೆಯಲ್ಲಿ ಕಳೆದ ರಾತ್ರಿ ಬಿದ್ದ ಮಳೆಯಿಂದ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)