ಶುಕ್ರವಾರ, ಆಗಸ್ಟ್ 12, 2022
28 °C

ಮೈಸೂರು: ಭತ್ತದ ನಾಟಿಗೆ ಪೂರಕವಾದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಒಂದು ತಾಸಿಗೂ ಹೆಚ್ಚಿನ ಅವಧಿ ವರ್ಷಧಾರೆಯಾಯ್ತು.

ಮೈಸೂರು ನಗರದಲ್ಲಿ ರಾತ್ರಿ ವೇಳೆ ಜೋರಾಗಿ ಮಳೆ ಸುರಿದಿದ್ದರಿಂದ, ಹಲವು ರಸ್ತೆಗಳ ಮೇಲೆ ನೀರು ಹರಿಯಿತು. ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.

ಮಳೆ ನೀರಿನಿಂದ ಚರಂಡಿಗಳು ತುಂಬಿ ರಸ್ತೆಯಲ್ಲೆಲ್ಲಾ ನೀರು ಹರಿಯಿತು. ಕೆಲವೊಂದು ರಸ್ತೆಗಳಲ್ಲಿ ಅರ್ಧ ಅಡಿಗೂ ಹೆಚ್ಚಿನ ನೀರು ಹರಿದಿದ್ದು ಕಂಡು ಬಂದಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು.

ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತಗೊಂಡಿದ್ದವು. ರಾತ್ರಿ ವೇಳೆ ರಸ್ತೆ ಬದಿ ಕುರುಕಲು ತಿಂಡಿ, ಪಾನಿಪೂರಿ, ಗೋಬಿ, ಚಾಟ್ಸ್‌, ಊಟ–ಉಪಾಹಾರದ ವಹಿವಾಟು ನಡೆಸುವ ವ್ಯಾಪಾರಿಗಳು ಮಳೆಯಿಂದ ಕಂಗಾಲಾದರು. ಗ್ರಾಹಕರು ಬರದಿದ್ದರಿಂದ ಪರಿತಪಿಸಿದರು.

ತಿ.ನರಸೀಪುರ, ಕೆ.ಆರ್.ನಗರ, ಹುಣಸೂರು, ನಂಜನಗೂಡು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಪಟ್ಟಣ ಸೇರಿದಂತೆ ಆಯಾ ತಾಲ್ಲೂಕಿನ ವಿವಿಧೆಡೆ ಚದುರಿದಂತೆ ಮಳೆಯಾಗಿದೆ. ಕೆಲವೆಡೆ ಜೋರು ಮಳೆ ಸುರಿದಿದ್ದರೆ, ಹಲವೆಡೆ ಸಾಧಾರಣ ಮಳೆಯಾಗಿದೆ.

ಮೈಸೂರು ತಾಲ್ಲೂಕಿನ ವರುಣಾ, ಜಯಪುರ ಸುತ್ತಮುತ್ತಲೂ ಬಿರುಸಿನಿಂದ ಮಳೆ ಸುರಿದಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮಗಳ ಸುತ್ತಮುತ್ತಲೂ ಮಳೆಯಾಗಿದೆ.

ಜಿಲ್ಲೆಯ ಗ್ರಾಮೀಣ ಪರಿಸರದಲ್ಲೂ ಮಳೆಯಾಗಿದ್ದರಿಂದ ರೈತ ಸಮೂಹದಲ್ಲಿ ಹರ್ಷ ವ್ಯಕ್ತವಾಗಿದೆ. ಭತ್ತದ ನಾಟಿ ಮಾಡಿದ್ದವರಿಗೆ, ಮಾಡುತ್ತಿರುವವರಿಗೆ ಈ ಮಳೆ ಪೂರಕವಾಗಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು