ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕರ ಕೊರತೆ; ಶರತ್‌ಚಂದ್ರಸ್ವಾಮೀಜಿ ಬೇಸರ

ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ‘ಬಸವಾನುಭವ ಚಿಂತನೆ’ ಕಾರ್ಯಕ್ರಮ
Last Updated 18 ಏಪ್ರಿಲ್ 2021, 12:27 IST
ಅಕ್ಷರ ಗಾತ್ರ

ಮೈಸೂರು: ಪ್ರಸ್ತುತ ಸಂಶೋಧಕರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಗಂಭೀರವಾದ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಇಲ್ಲಿನ ನಟರಾಜ ಸಭಾಭವನದಲ್ಲಿ ಭಾನುವಾರ ನಡೆದ ‘ಬಸವಾನುಭವ ಚಿಂತನೆ’ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ ಸೇರಿದಂತೆ ಅನೇಕ ಹಿರಿಯ ಸಂಶೋಧಕರು ಈಗ ಇಲ್ಲ. ಇವರ ಸ್ಥಾನವನ್ನು ತುಂಬುವ ಸಮರ್ಥರೂ ಕಾಣಿಸುತ್ತಿಲ್ಲ. ಸಂಶೋಧನಾ ಕ್ಷೇತ್ರ ಕಳೆಗುಂದುತ್ತಿದೆ. ಯುವ ಸಮುದಾಯ ಸಂಶೋಧನೆಯತ್ತ ಒಲವು ತೋರಬೇಕು ಎಂದು ಕರೆ ನೀಡಿದರು.

ಪ್ರಾಚೀನತೆಯಿಂದ ಯಾವುದೇ ಧರ್ಮ ದೊಡ್ಡದಾಗಲು ಸಾಧ್ಯವಿಲ್ಲ. ಸತ್ವದಿಂದ ಮಾತ್ರ ಧರ್ಮ ದೊಡ್ಡದಾಗುತ್ತದೆ. ಅತ್ಯಂತ ಪ್ರಾಚೀನ ಧರ್ಮ ಎನಿಸಿದ ಮಾತ್ರಕ್ಕೆ ಯಾವುದೇ ಧರ್ಮ ಶ್ರೇಷ್ಠವಾಗುವುದಿಲ್ಲ ಎಂದು ಹೇಳಿದರು.

ಇದೇ ಬಗೆಯಾದ ಪ್ರಾಚೀನತೆ ಚಪಲತೆಯಿಂದ ಕೆಲವು ಸಂಶೋಧಕರು ಪುರಾಣಗಳಲ್ಲಿನ ಅಂಶಗಳನ್ನು ಬರೆದರು. ಅವರ ಹಿಂಬಾಲಕರು ಇವೇ ಸತ್ಯವೆಂದು ಪ್ರಚಾರ ಮಾಡಿದರು ಎಂದರು.‌

ವೀರಶೈವ ಧರ್ಮವನ್ನು ಶಿವ ಸ್ಥಾಪಿಸಿದ, ಪಂಚಾಚಾರ್ಯರು ಪಾಲಿಸಿದರು ಎಂದು ಕೆಲವೆಡೆ ಹೇಳಿದರೆ, ಮತ್ತೆ ಕೆಲವೆಡೆ ಪಂಚಾಚಾರ್ಯರು ಸ್ಥಾಪಿಸಿದರು ಎಂದಿದೆ. ಈ ರೀತಿಯ ಅನೇಕ ಗೊಂದಲಗಳು ಇಂದಿಗೂ ಇವೆ ಎಂದು ಹೇಳಿದರು.

ಡಾ.ಎಸ್.ಎಂ.ಜಾಮದಾರ ಅವರು ಬರೆದು ಗೊ.ರು.ಚನ್ನಬಸಪ್ಪ ಅವರು ಕನ್ನಡಕ್ಕೆ ತಂದಿರುವ ವೀರಶೈವ ಧರ್ಮವು 12ನೇ ‘ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೆ?’, ‘ಲಿಂಗಾಯತರು ಮತ್ತು ವೀರಶೈವರು ಒಂದೆಯೋ ಅಥವಾ ಬೇರೆಯೋ?, ‘ಲಿಂಗಾಯತರು ಹಿಂದೂಗಳೇ’, ‘ಲಿಂಗಾಯತ ಹೋರಾಟ’ ಕೃತಿಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಹೊಸಮಠದ ಚಿದಾನಂದಸ್ವಾಮೀಜಿ, ಬೇಲಿಮಠದ ಶಿವರುದ್ರಸ್ವಾಮೀಜಿ, ನೀಲಕಂಠ ಮಠದ ಸಿದ್ಧಮಲ್ಲಸ್ವಾಮೀಜಿ, ಲೇಖಕರಾದ ಎಲ್.ಶಿವಲಿಂಗಪ್ಪ, ದೇವರಾಜ ಚಿಕ್ಕಹಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹಾದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT