ಬುಧವಾರ, ಅಕ್ಟೋಬರ್ 20, 2021
25 °C
ಸಾಹುಕಾರ್‌ ಚೆನ್ನಯ್ಯ ಅಖಾಡಕ್ಕೆ ಮೂಲಸೌಕರ್ಯ ಒದಗಿಸಲು ಬದ್ಧ: ಎಲ್‌.ನಾಗೇಂದ್ರ

ಮೈಸೂರು: ಕುಸ್ತಿ ಕಲೆಗೆ ಪುನರುಜ್ಜೀವನ; 3 ಸಂಘಗಳ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತೆರೆಮರೆಗೆ ಸರಿಯುತ್ತಿರುವ ಕುಸ್ತಿ ಕಲೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸ್ಥಾಪಿಸಿರುವ ಭಾರತೀಯ ಶೈಲಿ ಕುಸ್ತಿ ಸಂಘ, ಯುವ ಕುಸ್ತಿಪಟುಗಳ ಸಂಘ ಹಾಗೂ ಅಖಿಲ ಭಾರತೀಯ ಕುಸ್ತಿ ಮಹಾಸಂಘಗಳನ್ನು ಸೋಮವಾರ ಉದ್ಘಾಟಿಸಲಾಯಿತು.

ನಗರದ ಸಾಹುಕಾರ್‌ ಚೆನ್ನಯ್ಯ ಅಖಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಲ್‌.ನಾಗೇಂದ್ರ ಮಟ್ಟಿ ಪೂಜೆ ನೆರವೇರಿಸಿ ಮಾತನಾಡಿ, ‘15ರಿಂದ 20 ವರ್ಷಗಳಿಂದ ಈ ಅಖಾಡ ಮುಚ್ಚಿತ್ತು. ದೇವರಾಜ ಅರಸು ಅಖಾಡವನ್ನು ನಿರ್ಮಿಸಿದ್ದರೂ ಇಲ್ಲಿ ನಡೆದಿರುವ ಕುಸ್ತಿ ಪರಂಪರೆ ದೊಡ್ಡದು. ದೇಶ, ರಾಜ್ಯದ ದೊಡ್ಡ ಪೈಲ್ವಾನ್‌ಗಳು ಇಲ್ಲಿ ಕುಸ್ತಿ ಮಾಡಿದ್ದಾರೆ. ಈ ಅಖಾಡಕ್ಕೆ ಮೂಲಸೌಕರ್ಯ ಒದಗಿಸುವ ಅಗತ್ಯವಿದೆ. ಗೇಟ್‌, ಚಾವಣಿ ನಿರ್ಮಾಣ, ನೆರಳಿನ ವ್ಯವಸ್ಥೆ ಮಾಡಲು ಸಂಬಂಧಪಟ್ಟವರ ಗಮನ ಸೆಳೆಯುತ್ತೇನೆ. ಅಖಾಡದ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಬೇಕು’ ಎಂದು ಮನವಿ ಮಾಡಿದರು.

ಸಾಹುಕಾರ್‌ ಚೆನ್ನಯ್ಯ ಅಖಾಡದ ಜಯಚಾಮರಾಜ ಒಡೆಯರ್‌ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌. ಮಹದೇವ್‌ ಮಾತನಾಡಿ, ‘ಉದಯೋನ್ಮುಖ ಕುಸ್ತಿಪಟುಗಳಿಗೆ ತರಬೇತಿ ನೀಡುವುದು, ಗರಡಿ ಹಾಗೂ ವ್ಯಾಯಾಮ ಶಾಲೆಗಳ ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಸಂಘಗಳನ್ನು ಸ್ಥಾಪಿಸಲಾಗಿದೆ’ ಎಂದರು.

ಕುಸ್ತಿಪಟುಗಳಾದ ಮುಕುಂದ, ಟೈಗರ್‌ ಬಾಲಾಜಿ, ಲಕ್ಷ್ಮೀನಾರಾಯಣ ಯಾದವ್‌ ಅವರನ್ನು ಅಭಿನಂದಿಸಲಾಯಿತು.

ಶಾಸಕ ಜಿ.ಟಿ.ದೇವೇಗೌಡ, ಮೇಯರ್‌ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್‌ಕುಮಾರ್ ಗೌಡ, ಕಾಂಗ್ರೆಸ್‌ ಮುಖಂಡರಾದ ಎಂ.ಕೆ.ಸೋಮಶೇಖರ್‌, ವಾಸು, ಪಾಲಿಕೆ ಸದಸ್ಯೆ ಛಾಯಾದೇವಿ, ಭಾರತೀಯ ಶೈಲಿ ಕುಸ್ತಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ಯುವ ಕುಸ್ತಿಪಟುಗಳ ಸಂಘದ ಅಧ್ಯಕ್ಷ ಜೀವನ್‌ ಕುಮಾರ್‌, ಅಖಿಲ ಭಾರತೀಯ ಕುಸ್ತಿ ಮಹಾಸಂಘದ ಮೈಸೂರು ಘಟಕದ ಅಧ್ಯಕ್ಷ ಅಮೃತ್‌ ಪುರೋಹಿತ್‌, ಪೈಲ್ವಾನ್‌ಗಳಾದ ಬಸವರಾಜು, ಗಿರಿ, ಜಗದೀಶ್‌ ಇದ್ದರು.

ಜಟ್ಟಿತನ ಮೆರೆದ ಕುಸ್ತಿಪಟುಗಳು
ಸಂಘಗಳ ಉದ್ಘಾಟನೆಯ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನಡೆದ ನಾಡ ಕುಸ್ತಿ ಪಂದ್ಯದಲ್ಲಿ ಕುಸ್ತಿಪಟುಗಳು ಮಟ್ಟಿಯಲ್ಲಿ ಏಟು ಎದಿರೇಟು ನೀಡಿ ಜಟ್ಟಿತನ ಮೆರೆದರು. ಇಶ್ಕಾನ್‌ ಗರಡಿ ಮನೆಯ ತೌಕೀರ್‌ ಖುರೇಷಿ ಹಾಗೂ ಭೂತಪ್ಪನವರ ಗರಡಿ ಮನೆಯ ವಿನಾಯಕ್‌ ನಡುವೆ ನಡೆದ ಕುಸ್ತಿ ರೋಚಕವಾಗಿತ್ತು. ಖುರೇಷಿ ಹಾಕಿದ ಪಟ್ಟು ಗೆಲುವಿನ ಸನಿಹಕ್ಕೆ ಕರೆದೊಯ್ಯಿತು. ಆದರೆ, ಕೊನೆ ಗಳಿಗೆಯಲ್ಲಿ ಅದು ಸಾಧ್ಯವಾಗದೆ ಸಮಬಲದಲ್ಲಿ ಪಂದ್ಯ ಕೊನೆಗೊಂಡಿತು.

ಚಾಮುಂಡಿ ವಿಹಾರ ಕ್ರೀಡಾಂಗಣದ ಗರಡಿ ಮನೆಯ ಸುಮಂತ್‌ ಹಾಗೂ ನಂಜನಗೂಡಿನ ಕಳಲೆಯ ಪ್ರಸಾದ್‌ ನಡುವೆ ನಡೆದ ಕುಸ್ತಿ ಪಂದ್ಯದಲ್ಲಿ ಸುಮಂತ್‌ ಜಯಭೇರಿ ಬಾರಿಸಿದರು.

ಆರು ವರ್ಷ ವಿಭಾಗದಲ್ಲಿ ಗಾಯತ್ರಿಪುರಂ 2ನೇ ಹಂತದ ಧೀರಜ್‌ ಸಾತ್ವಿಕ್‌ ಹಾಗೂ ಆಲನಹಳ್ಳಿ ಕೌಸ್ತುಬ್‌ ನಡುವೆ ನಡೆದ ಮಟ್ಟಿಕುಸ್ತಿಯಲ್ಲಿ ಸಮಬಲ ಪೈಪೋಟಿ ನೀಡಿ ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು