ಶನಿವಾರ, ಜುಲೈ 31, 2021
25 °C

ರಸ್ತೆಗೆ ವಿಮೆ ಮಾಡಿಸಿದ ಕ್ಯಾಬ್‌ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಬೋಗಾದಿಯ ಸಿಎಫ್‌ಟಿಆರ್‌ಐ ಬಡಾವಣೆ ನಿವಾಸಿ, ಕ್ಯಾಬ್‌ ಚಾಲಕ ವಾಸು ಅವರು ತಾವು ವಾಸ ಇರುವ ಮನೆಯ ರಸ್ತೆಗೆ ₹3.23 ಲಕ್ಷ ಮೊತ್ತದ ವಿಮೆ ಮಾಡಿಸಿದ್ದಾರೆ. ಇದಕ್ಕೆ ತಗಲುವ ವಾರ್ಷಿಕ ಪ್ರೀಮಿಯಂ ₹ 889 ಅನ್ನು ತಾವೇ ಭರಿಸಿದ್ದಾರೆ. ಜೂನ್‌ 26ರಿಂದಲೇ ವಿಮೆ ಅವಧಿ ಆರಂಭವಾಗಿದೆ.

ನೈಸರ್ಗಿಕ ಕಾರಣಗಳಿಂದ ಹಾಗೂ ಕಿಡಿಗೇಡಿಗಳಿಂದ ರಸ್ತೆಗೆ ಹಾನಿಯಾದರೆ ಓರಿಯಂಟಲ್ ವಿಮಾ ಕಂಪನಿ ₹3.23 ಲಕ್ಷದವರೆಗೆ ನಷ್ಟ ಭರಿಸುತ್ತದೆ. ನಗರದಲ್ಲಿ ಈ ರೀತಿ ವಿಮೆ ಮಾಡಿಸಿದ ಮೊದಲ ವ್ಯಕ್ತಿ ಎಂಬ ಶ್ರೇಯಕ್ಕೆ ಇವರು ಪಾತ್ರರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಸು, ‘ಪ್ರಜಾವಾಣಿ’ ‍ಪ‍ತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಉತ್ತರ ದಿಕ್ಕಿನಿಂದ’ ಅಂಕಣದಲ್ಲಿ ಹುಬ್ಬಳ್ಳಿಯ ಡಾ.ಮೃತ್ಯುಂಜಯ ಸಿಂಧೂರ ಅವರು ರಸ್ತೆಗೆ ವಿಮೆ ಮಾಡಿಸಿದ ಉಲ್ಲೇಖ ಇತ್ತು. ಇದನ್ನು ಓದಿ ಅವರಂತೆ ನಾನೂ ರಸ್ತೆಗೆ ವಿಮೆ ಮಾಡಿಸಬೇಕು ಎಂದು 2018ರಿಂದ ಶ್ರಮಪಟ್ಟೆ. ಕೊನೆಗೂ ಪಾಲಿಕೆ ಅನುಮತಿ ನೀಡಿತು. ವಿಮಾ ಕಂಪನಿಯ ಮನವೊಲಿಸಲಾಯಿತು. ಸದ್ಯ, ರಸ್ತೆಗೆ ವಿಮೆ ಆಗಿದೆ. ಒಂದು ವೇಳೆ ರಸ್ತೆಗೆ ಹಾನಿಯಾದರೆ ವಿಮೆಯ ಹಣದಿಂದ ತಕ್ಷಣವೇ ಅದನ್ನು ದುರಸ್ತಿ ಮಾಡಬಹುದಾಗಿದೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ‘ಇದೇ ಮೊದಲ ಬಾರಿಗೆ ಸಾರ್ವಜನಿಕರೊಬ್ಬರು ರಸ್ತೆಗೆ ವಿಮೆ ಮಾಡಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಯಾರಾದರೂ ಆಸಕ್ತಿ ವಹಿಸಿದರೆ ಇನ್ನಷ್ಟು ರಸ್ತೆಗಳಿಗೆ ವಿಮೆ ಮಾಡಿಸಲು ಅನುಮತಿ ನೀಡಲಾಗುವುದು’ ಎಂದರು.

ಮೊದಲ ಬಾರಿಗೆ ರಸ್ತೆಗೆ ವಿಮೆ ಮಾಡಿಸಿದ ಹುಬ್ಬಳ್ಳಿಯ ಡಾ.ಮೃತ್ಯುಂಜಯ ಸಿಂಧೂರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ವಾಸು ಅವರ ಕಾರ್ಯವನ್ನು ಶ್ಲಾಘಿಸಿದರು. ‘ಬಡಾವಣೆಯಲ್ಲಿರುವ ನಿವಾಸಿಗಳು, ಸ್ವಲ್ಪ ಸ್ವಲ್ಪ ಹಣ ಹಾಕಿ ಅಥವಾ ಬಡಾವಣೆಯ ನಿವಾಸಿಗಳ ಸಂಘ ವಿಮೆ ಮಾಡಿಸಬಹುದು. ಮುಖ್ಯವಾಗಿ ಪಾಲಿಕೆಯ ಅಧಿಕಾರಿಗಳೇ ವಿಮೆ ಮಾಡಿಸಿದರೆ ರಸ್ತೆ ಮಾಡುವ ಎಂಜಿನಿಯರಿಂಗ್‌ ವಿಭಾಗಕ್ಕೂ ಒಂದು ಉತ್ತರದಾಯಿತ್ವ ಬರುತ್ತದೆ. ಸಾರ್ವಜನಿಕರಿಗೆ ಒಳ್ಳೆಯ ರಸ್ತೆ ಲಭ್ಯವಾಗುತ್ತದೆ’ ಎಂದು ತಿಳಿಸಿದರು.

ಮಾಹಿತಿಗೆ ಮೊ: 9901563176 ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು