ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಗ್ರಾಮೀಣದಲ್ಲಿ ಗರಿಗೆದರಿದ ರಾಜಕೀಯ

ಜಿಲ್ಲಾ–ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ: ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯ
Last Updated 10 ಜುಲೈ 2021, 4:19 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ 53 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ 9 ತಾಲ್ಲೂಕು ಪಂಚಾಯಿತಿಗಳ 147 ಕ್ಷೇತ್ರಗಳಿಗೆ ಮೀಸಲಾತಿ ಘೋಷಣೆಯಾದ ಬೆನ್ನಿಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿರುವ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌–ಜೆಡಿಎಸ್‌–ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿವೆ. ಉಳಿದ ಪಕ್ಷಗಳು ಸಹ ಗ್ರಾಮೀಣದಲ್ಲಿ ನೆಲೆ ಕಂಡುಕೊಳ್ಳಲು ಕಸರತ್ತು ನಡೆಸಿವೆ.

ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಬಿಜೆಪಿಗೆ ಜಿಲ್ಲೆಯ ಗ್ರಾಮಾಂತರದಲ್ಲೂ ನೆಲೆ ವಿಸ್ತರಿಸಿಕೊಳ್ಳಬೇಕು ಎಂಬ ಉಮೇದು. ಕಾಂಗ್ರೆಸ್‌ನಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತವರಲ್ಲಿ ಪಾರಮ್ಯ ಮುಂದುವರೆಸುವ ಉತ್ಸಾಹ.

ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ. ಜಿಲ್ಲಾ ನಾಯಕರಾದ ಜಿ.ಟಿ.ದೇವೇಗೌಡ–ಸಾ.ರಾ.ಮಹೇಶ್‌ ನಡುವಿನ ಶೀತಲ ಸಮರದಲ್ಲೂ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಸವಾಲು. ಮೂರು ಪಕ್ಷಗಳು ಸ್ವತಂತ್ರವಾಗಿ ಬಹುಮತ ಪಡೆಯಲಿಕ್ಕಾಗಿ ಕಸರತ್ತು ಆರಂಭಿಸಿವೆ. ಜಿಲ್ಲಾ ಪಂಚಾಯಿತಿ ಜೊತೆಗೆ ತಾಲ್ಲೂಕು ಪಂಚಾಯಿತಿ ಚುಕ್ಕಾಣಿಗಾಗಿಯೂ ತಂತ್ರಗಾರಿಕೆ ರೂಪಿಸಿವೆ.

ಹಾಲಿ ಶಾಸಕರು–ಮಾಜಿ ಶಾಸಕರು, ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿ ಗಳಾಗಿರುವವರು ಸಹ ಪಂಚಾಯಿತಿ ಚುನಾವಣೆಯಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಚುನಾವಣೆಯಲ್ಲಿ ಬೆಂಬಲಿಗರನ್ನೇ ಗೆಲ್ಲಿಸಿಕೊಂಡರೆ; ವಿಧಾನಸಭಾ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಅಸಮಾಧಾನ: ‘ಕೇಂದ್ರ–ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಪ್ರಯೋಜನವಿಲ್ಲ. ಜಿಲ್ಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರ ಅಪೇಕ್ಷೆಗಿಂತ; ವಿರೋಧ ಪಕ್ಷಗಳ ಶಾಸಕರು–ನಾಯಕರ ಅಪೇಕ್ಷೆಗೆ ಮನ್ನಣೆ ಸಿಗುತ್ತಿದೆ’ ಎಂದು ಬಿಜೆಪಿ ಗ್ರಾಮಾಂತರ ಘಟಕದ ಮುಖಂಡರೊಬ್ಬರು ತಿಳಿಸಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅಣತಿಯಂತೆ ಎಲ್ಲವೂ ನಡೆದಿದೆ. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೂಚನೆಯಂತೆ ಮೀಸಲಾತಿ ನಿಗದಿಯಾಗಿದೆ. ನಿಷ್ಠಾವಂತ ಕಾರ್ಯಕರ್ತರು ಸಿದ್ಧತೆ ನಡೆಸಿದ್ದ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ಮೀಸಲಾತಿ ನಿಗದಿಯಾಗಿದೆ.’ ಎಂದು ವಿಷಾದಿಸಿದರು.

‘ಪಕ್ಷದ ಅಧ್ಯಕ್ಷರು–ಉಸ್ತುವಾರಿ ಗಮನಕ್ಕೆ ತಂದರೂ ಪ್ರಯೋಜನವಾಗದಿದ್ದರಿಂದ; ಹಲವರು ಮೀಸಲಾತಿಯನ್ನೇ ಪ್ರಶ್ನಿಸಿ ಜುಲೈ 8ರೊಳಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುವ ಯೋಚನೆಯಲ್ಲಿಯೂ ಇದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಬಿಜೆಪಿ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ತೋಡಿಕೊಂಡರು.

ಚುನಾವಣೆಗೆ ಸಜ್ಜು: ಮಂಗಳಾ

‘ಮೊದಲಿನಿಂದಲೇ ಚುನಾವಣೆಗಾಗಿ ಸಂಘಟನಾತ್ಮಕವಾಗಿ ಸಜ್ಜಾಗಿದ್ದೇವೆ. ಪೇಜ್‌ ಪ್ರಮುಖ್, ಬೂತ್‌ ಸಮಿತಿ, ಪಂಚರತ್ನಗಳನ್ನು ಮತ್ತೆ ಸಕ್ರಿಯಗೊಳಿಸಿದ್ದೇವೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸೂಕ್ತ ಅಭ್ಯರ್ಥಿಗಳ ಶೋಧ ಶುರುವಾಗಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್.

‘ಬಿಜೆಪಿಯ ಗೆಲುವಿಗೆ ಪೂರಕ ವಾತಾವರಣವಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಇಬ್ಬರು ಸಂಸದರು, ಶಾಸಕರ ಸಾರಥ್ಯದಲ್ಲಿ ಚುನಾವಣೆ ಎದುರಿಸುತ್ತೇವೆ. ಪಂಚಾಯಿತಿ ಚುಕ್ಕಾಣಿ ಹಿಡಿಯಲು ಈಗಿನಿಂದಲೇ ಕಾರ್ಯ ಯೋಜನೆ ರೂಪಿಸಿದ್ದೇವೆ’ ಎಂದರು.

ಜನಾಭಿಪ್ರಾಯವೇ ಮಾನದಂಡ

‘ಸಿದ್ದರಾಮಯ್ಯ ಸಾರಥ್ಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ಸಭೆ ನಡೆದಿದೆ. ಪ್ರಭಾವ, ದುಡ್ಡಿರೋರಿಗೆ ಮಣೆ ಹಾಕಲ್ಲ. ಜನಾಭಿಪ್ರಾಯ ಕೇಳಿ ಬಂದವರಿಗೆ ಈ ಬಾರಿ ಟಿಕೆಟ್‌ ಕೊಡಲಾಗುವುದು’ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್.

‘ಸರ್ವೆ ನಡೆಸುತ್ತೇವೆ. ಯುವಕರಿಗೆ ಹಾಗೂ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ಕೊಡಲಾಗುವುದು. ಪ್ರತಿ ತಾಲ್ಲೂಕಿ ಗೊಂದು ಹತ್ತು ಜನರ ಸ್ಕ್ರೀನಿಂಗ್‌ ಸಮಿತಿ ಮಾಡುತ್ತೇವೆ. ಈ ಸಮಿತಿ ಶಿಫಾರಸು ಮಾಡಿದವರಿಗೆ ಮನ್ನಣೆ ನೀಡುತ್ತೇವೆ’ ಎಂದರು.

ಸಾಮೂಹಿಕ ನಾಯಕತ್ವ: ಜೆಡಿಎಸ್‌

‘ಸಾಮೂಹಿಕ ನಾಯಕತ್ವದಲ್ಲಿ ಪಂಚಾಯಿತಿ ಚುನಾವಣೆ ಎದುರಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಬುಧವಾರವಷ್ಟೇ ಈ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿದೆ’ ಎಂದು ಜೆಡಿಎಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎನ್‌.ನರಸಿಂಹಮೂರ್ತಿ ತಿಳಿಸಿದರು.

‘ಪಕ್ಷದ ಟಿಕೆಟ್‌ಗಾಗಿ ಭಾರಿ ಬೇಡಿಕೆಯಿದೆ. ಮೀಸಲು ಕ್ಷೇತ್ರಗಳಲ್ಲೂ ಹಲವರು ಟಿಕೆಟ್‌ ಕೇಳುತ್ತಿದ್ದಾರೆ. ಬಹುಮತದೊಂದಿಗೆ ಜಿಲ್ಲಾ ಪಂಚಾಯಿತಿ ಚುಕ್ಕಾಣಿ ಹಿಡಿಯುವ ಗುರಿ ನಮ್ಮದು. ನಾಲ್ವರು ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸಾಥ್‌ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT