ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ‘ಸಚ್ಚಿದಾನಂದಶ್ರೀ’ ಗುರುವಂದನಾ ಗ್ರಂಥವು ಸಾರ್ವಕಾಲಿಕ ಮಹತ್ವವನ್ನು ಪಡೆದಿದೆ ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ‘ಸಚ್ಚಿನಾಂದಶ್ರೀ’ ಗುರುವಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತೂಕ, ಗಾತ್ರ ಹಾಗೂ ಮಹತ್ವದಲ್ಲಿ ಈ ಕೃತಿಯು ಬೃಹತ್ ಕೃತಿಯಾಗಿದೆ. ಇದು ಸಂಗ್ರಹಣಾರ್ಹ ಹೊತ್ತಿಗೆ. ಕನ್ನಡದಲ್ಲಿ ಈಚಿನ ದಿನಗಳಲ್ಲಿ ಬಂದಿರುವ ಶ್ರೇಷ್ಠ ಕೃತಿ ಇದಾಗಿದೆ. ಇದನ್ನು ಪುಟ್ಟ ವಿಶ್ವಕೋಶವೆಂದೇ ಕರೆಯಬಹುದು ಎಂದು ಅವರು ವಿಶ್ಲೇಷಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರೇ ವಿಶ್ವಕೋಶವಿದ್ದಂತೆ. ಏಕೆಂದರೆ, ಅವರು ತಿಳಿಯದೇ ಇರುವ ವಿಚಾರಗಳಿಲ್ಲ. ಎಲ್ಲ ಕ್ಷೇತ್ರಗ ಳಲ್ಲೂ ಅವರಿಗೆ ಅತೀವ ಆಸಕ್ತಿ. ಜ್ಞಾನ ಸಂಪಾದನೆಗೆ ಅವರು ಮಾದರಿಯಿ ದ್ದಂತೆ. ಹಾಗಾಗಿ, ಅವರ ವ್ಯಕ್ತಿತ್ವದ ನಿಜವಾದ ಪ್ರತಿಫಲನ ಈ ಕೃತಿಯಲ್ಲಿದೆ ಎಂದು ಹೇಳಿದರು.
ಈಚಿನ ದಿನಗಳಲ್ಲಿ ಅಭಿನಂದನಾ, ಗುರುವಂದನಾ ಗ್ರಂಥಗಳು ಅರ್ಥ ಕಳೆದುಕೊಳ್ಳುತ್ತಿವೆ. ಮುಖಪುಟವನ್ನಷ್ಟೇ ಮುದ್ರಿಸಿ ಬಿಡುಗಡೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನು ಬಿಟ್ಟುಬಿಡಬೇಕು. ಈ ಗ್ರಂಥಗಳಿಗೆ ಗೌರವ ಹೆಚ್ಚಿರುವುದು. ಗೌರವ ಹೆಚ್ಚಿಸುವಂತೆ ಈ ಕೃತಿಯ ಸಂಪಾದಕೀಯ ಮಂಡಳಿಯು ಕಾರ್ಯನಿರ್ವಹಿಸಿದೆ. ಕಾರ್ಯಕ್ರಮಕ್ಕೆ ಹದಿನೈದು ದಿನಗಳು ಇರುವಂತೆಯೇ ಮುದ್ರಿತ ಕೃತಿಯನ್ನು ಮನೆಗೆ ಕಳುಹಿಸಿ ಅಧ್ಯಯನಕ್ಕೆ ಅವಕಾಶ ಮಾಡಿಕೊ ಟ್ಟಿದ್ದಾರೆ. ಇದು ಅಭಿನಂದನಾರ್ಹವಾದ ವಿಚಾರ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಈಚಿನ ದಿನಗಳಲ್ಲಿ ಸಾಮಾಜಿಕ ಮೌಲ್ಯಗಳು ಕುಸಿದಿವೆ. ಸರಿ, ತಪ್ಪುಗಳನ್ನು ಹೇಳುತ್ತಿದ್ದ ಪೋಷಕರು ವಿಮುಖರಾಗಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆವಹಿಸಿದ್ದರು. ನಟ ಶ್ರೀನಾಥ್, ಪತ್ರಕರ್ತ ಈಶ್ವರ ದೈತೋಟ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ತುಮಕೂರು ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್ ಅತಿಥಿಗಳಾಗಿದ್ದರು. ಕೃತಿಯ ಪ್ರಧಾನ ಸಂಪಾದಕಿ ಪ್ರೊ.ಪದ್ಮಾಶೇಖರ ಸ್ವಾಗತಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.